ಮಂಗಳೂರು: ಬೀದರ್ ಜಿಲ್ಲೆ ಹಾಗೂ ತೆಲಂಗಾಣ ರಾಜ್ಯದಿಂದ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು 44 ಕೆ.ಜಿ. ಗಾಂಜಾ ಸಹಿತ ಏಳು ಮಂದಿಯನ್ನು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ನರಿಂಗಾನ ತೌಡುಗೋಳಿ ನಿವಾಸಿಗಳಾದ ಅಬ್ದುಲ್ ಅಝೀಝ್(40), ಮೊಹಮ್ಮದ್ ಹಫೀಝ್(23), ಮೊಯ್ದೀನ್ ಹಫೀಝ್(34), ಗುರುಪುರ ಗುರುನಗರ ನಿವಾಸಿ ಸಂದೀಪ್(34), ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಮನೂರ್ ಮಂಡಲ್ ಗ್ರಾಮ ನಿವಾಸಿ ವಿಠಲ ಚವ್ಹಾಣ್(35), ಬೀದರ್ ಜಿಲ್ಲೆ ಬಾಲ್ಕಿ ತಾಲೂಕಿನ ದಂಡೆ ಕೋಸಮ್ ಗ್ರಾಮದ ಕಲ್ಲಪ್ಪ(40), ಬಾಲ್ಕಿ ತಾಲೂಕಿನ ಸೇವಾ ನಗರ ತಾಂಡಾ ನಿವಾಸಿ ಸಂಜು ಕುಮಾರ್ (34) ಬಂಧಿತರು.
ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾಹಿತಿ ನೀಡಿ, ಬೀದರ್ ಹಾಗೂ ತೆಲಂಗಾಣದಿಂದ ಮಂಗಳೂರಿಗೆ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಉಳ್ಳಾಲ ಹಾಗೂ ಕೊಣಾಜೆ ವ್ಯಾಪ್ತಿಯಲ್ಲಿ ಆರೋಪಿಗಳನ್ನು ಗಾಂಜಾ ಸಹಿತ ಬಂಧಿಸಿದ್ದಾರೆ. ಈ ಸಂದರ್ಭ ಆರೋಪಿಗಳು ಎರಡು ಕಾರುಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಪೊಲೀಸರು 40 ಕೆ.ಜಿ. ಗಾಂಜಾ ಸಹಿತ ಎರಡು ಕಾರುಗಳು, ಏಳು ಮೊಬೈಲ್ ಗಳು ಹಾಗೂ ಆರೋಪಿಗಳಾದ ಅಝೀಜ್, ಮೊಯ್ದೀನ್ ಹಫೀಸ್, ವಿಠಲ ಚವ್ಹಾಣ್, ಕಲ್ಲಪ್ಪ, ಸಂಜುಕುಮಾರ್ ರನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಕೈಗೊಂಡ ಉಳ್ಳಾಲ ಪೊಲೀಸರು ಸ್ಕೂಟರ್ ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇನ್ನಿಬ್ಬರು ಆರೋಪಿಗಳಾದ ಮೊಹಮ್ಮದ್ ಹಫೀಝ್ ಹಾಗೂ ಸಂದೀಪ್ ಎಂಬವರನ್ನು ಬಂಧಿಸಿ, 4.630 ಕೆ.ಜಿ. ಗಾಂಜಾ ಸಹಿತ ಒಂದು ಸ್ಕೂಟರ್ ವಶಪಡಿಸಿದ್ದಾರೆ.
ಬಂಧಿತರಿಂದ ಒಟ್ಟು 9.75 ಲಕ್ಷ ರೂ. ಮೌಲ್ಯದ ಗಾಂಜಾ ಸಹಿತ ಎರಡು ಕಾರುಗಳು, ಒಂದು ಸ್ಕೂಟರ್ ಹಾಗೂ ಮೊಬೈಲ್ ನ್ನು ಪೊಲೀಸರು ವಶಪಡಿಸಿದ್ದಾರೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 23.25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
Kshetra Samachara
22/01/2021 04:57 pm