ಮಂಗಳೂರು: ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣದ ಆರೋಪಿಗಳು ಮಂಗಳೂರಿನಲ್ಲಿ ಉಗ್ರ ಸಂಘಟನೆಯ ಪರ ಗೋಡೆ ಬರಹ ಬರೆದ ಪ್ರಕರಣದಲ್ಲಿ ಈ ಹಿಂದೆಯೇ ಅರೆಸ್ಟ್ ಆಗಿದ್ದರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಆರೋಪಿಗಳು ಮಹಮ್ಮದ್ ಶಾರೀಕ್ ಹಾಗೂ ಮಹಮ್ಮದ್ ಮುನಿರ್ ಅಹ್ಮದ್ ಬಂಧಿತರಾಗಿದ್ದ ಆರೋಪಿಗಳಾಗಿದ್ದಾರೆ.
ದುಷ್ಕರ್ಮಿಗಳು 2020 ಡಿಸೆಂಬರ್ ನಲ್ಲಿ ಮಂಗಳೂರು ನಗರದ ಬಿಜೈ ಮತ್ತು ಕೋರ್ಟ್ ರಸ್ತೆಯ ಗೋಡೆಗಳಲ್ಲಿ ಉಗ್ರರ ಪರ ಬರಹಗಳನ್ನು ಬರೆದು ದುಷ್ಕೃತ್ಯ ಮೆರೆದಿದ್ದರು. ಇವರು 'ಲಷ್ಕರ್ ಇ ತೋಯ್ಬಾ' ಉಗ್ರ ಸಂಘಟನೆಯ ಪರ ಜಿಂದಾಬಾದ್ ಎಂದು ಬರೆದಿದ್ದರು. ಬಳಿಕ ಪೊಲೀಸರು ಆ ಗೋಡೆ ಬರಹನ್ನು ಅಳಿಸಿ ಹಾಕಿ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದರು.
2020 ನ.27ರಂದು ಕದ್ರಿ ಠಾಣೆಯ ಬಳಿ ಬಿಜೈ ಅಪಾರ್ಟ್‌ಮೆಂಟ್‌ನ ಗೋಡೆಯ ಬರಹದಲ್ಲಿ 'ಇಲ್ಲಿನ ಸಂಘಿಗಳು ಮತ್ತು ಮನುವಾದಿಗಳ ಜೊತೆ ವ್ಯವಹರಿಸಲು ಲಷ್ಕರ್ ಮತ್ತು ತಾಲಿಬಾನಿಗಳನ್ನು ಬರುವಂತೆ ಮಾಡಬೇಡಿ. ಲಷ್ಕರ್ ಝಿಂದಾಬಾದ್, ತಾಲಿಬಾನ್ ಝಿಂದಾಬಾದ್' ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿತ್ತು. ಈ ಗೋಡೆ ಬರಹ ಪ್ರಕರಣದಿಂದ ಇಡೀ ದೇಶದಲ್ಲಿಯೇ ತಲ್ಲಣ ಉಂಟಾಗುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಆದರೆ, ಇವರಿಗೆ ಉಗ್ರರೊಂದಿಗೆ ಯಾವುದೇ ರೀತಿಯ ನಂಟು ಇಲ್ಲ ಎಂದು ವಿಚಾರಣೆಯಿಂದ ತಿಳಿದು ಜಾಮೀನು ದೊರಕಿತ್ತು. ಆದರೆ ಇದೀಗ ಉಗ್ರ ಸಂಘಟನೆಯ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
Kshetra Samachara
20/09/2022 06:32 pm