ಕುಂದಾಪುರ: ಹದಿನಾರು ವರ್ಷಗಳ ದಾಂಪತ್ಯವನ್ನು ಕುಡುಕ ಪತಿಯೊಬ್ಬ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದರೊಂದಿಗೆ ದಾರುಣವಾಗಿ ಅಂತ್ಯಗೊಳಿಸಿದ್ದಾನೆ. ಉಡುಪಿ ಜಿಲ್ಲೆಯ ಕುಂದಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ದೇವಲ್ಕುಂದ ಶಾಲೆ ಸಮೀಪ ಈ ಘಟನೆ ನಡೆದಿದೆ.
ಸೊರಬ ನಿವಾಸಿ ಪೂರ್ಣಿಮಾ ಆಚಾರ್ಯ(38) ಕೊಲೆಯಾದ ಮಹಿಳೆಯಾದರೆ, ದೇವಲ್ಕುಂದದಲ್ಲಿ ವಾಸವಿರುವ ರವಿ ಆಚಾರ್ಯ (42) ಕೊಲೆ ಆರೋಪಿಯಾಗಿದ್ದಾನೆ. ಪತ್ನಿಯನ್ನು ಕೊಲೆಗೈದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಪೂರ್ಣಿಮಾ ಆಚಾರ್ಯ, ಹದಿನಾರು ವರ್ಷಗಳ ಹಿಂದೆ ಕೋಗಾರ್ ಮೂಲದ ರವಿ ಆಚಾರ್ಯನನ್ನು ವಿವಾಹವಾಗಿದ್ದರು. ರವಿ ಆಚಾರ್ಯ ಹೆಮ್ಮಾಡಿ ಸಮೀಪ ಟಿಪ್ಪರ್ ಚಾಲಕನಾಗಿ ದುಡಿಯುತ್ತಿದ್ದ. ಪತಿ ಹಾಗೂ ಪತ್ನಿ ತಮ್ಮ ಇಬ್ಬರೂ ಮಕ್ಕಳೊಂದಿಗೆ ಮೊದಲು ಇಲ್ಲಿಯೇ ನೆಲೆಸಿದ್ದರು. ಕುಡಿತದ ಚಟ ಹೊಂದಿದ್ದ ರವಿ ಕುಡಿದು ಆಗಾಗ ಗಲಾಟೆ ಮಾಡುತ್ತಿದ್ದು, ಪತ್ನಿಗೂ ಕಿರುಕುಳ ನೀಡುತ್ತಿದ್ದ. ಬಳಿಕ ಪತಿಯಿಂದ ದೂರ ಉಳಿದುಕೊಂಡಿದ್ದ ಪೂರ್ಣಿಮಾ ತಮ್ಮ ಇಬ್ಬರು ಮಕ್ಕಳೊಂದಿಗೆ ತಾಯಿಯ ಮನೆ ಸೊರಬದಲ್ಲಿ ನೆಲೆಸಿದ್ದರು.
ಆ.21 ರವಿವಾರ ಹೆಮ್ಮಾಡಿ ಸಮೀಪ ಸಂಬಂಧಿಕರ ಮನೆಯ ಕಾರ್ಯಕ್ರಮವೊಂದಕ್ಕೆ ಪೂರ್ಣಿಮಾ ಬಂದಿದ್ದು ಪತಿ ಕರೆ ಮಾಡಿ ಮನೆಗೆ ಬರುವಂತೆ ಕೇಳಿಕೊಂಡಿದ್ದ. ಅದರಂತೆ ಪೂರ್ಣಿಮಾ ಕಾರ್ಯಕ್ರಮ ಮುಗಿದ ಬಳಿಕ ಪತಿ ನೆಲೆಸಿದ್ದ ಬಾಡಿಗೆ ಮನೆಗೆ ತೆರಳಿದ್ದರು. ರಾತ್ರಿ ಪತಿ-ಪತ್ನಿ ಮಧ್ಯೆ ಜಗಳ ನಡೆದು ಪತಿ ಪತ್ನಿಯನ್ನು ಕಬ್ಬಿಣದ ಪ್ಲೇಟ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸೊರಬದಲ್ಲಿದ್ದ ಮಕ್ಕಳು ರವಿವಾರ ರಾತ್ರಿಯಿಂದ ತಾಯಿ ಮೊಬೈಲ್‌ಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಬಳಿಕ ಮನೆಗೆ ಹೋಗಿ ನೋಡಿದಾಗ ಕೊಲೆ ಮತ್ತು ಆತ್ಮಹತ್ಯೆ ಕೃತ್ಯ ಬಯಲಿಗೆ ಬಂದಿದೆ. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ, ಸಿಪಿಐ ಗೋಪಿಕೃಷ್ಣ, ಠಾಣಾಧಿಕಾರಿ ಪವನ್ ನಾಯ್ಕ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
PublicNext
22/08/2022 10:19 pm