ಬೆಳ್ತಂಗಡಿ: ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಲು ಯತ್ನಿಸಿದ ಕಳ್ಳನನ್ನು ಸಾರ್ವಜನಿಕರು ಅಟ್ಟಾಡಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಆಗಿದೆ.
ಬೆಳ್ತಂಗಡಿ ನಗರದ ಸಂತೆಕಟ್ಟೆ ಎಂಬಲ್ಲಿ ಲಾಯಿಲ ನಿವಾಸಿಯೊಬ್ಬರು ತಮ್ಮ ಸುಜುಕಿ ಕಂಪನಿಯ ಜಿಕ್ಸರ್-150 ಬೈಕ್ ನ ಅನಿಲ್ ವೈನ್ ಶಾಪ್ ಬಳಿ ಪಾರ್ಕ್ ಮಾಡಿ ಮೇಲ್ಭಾಗದಲ್ಲಿರುವ ರೋಯಲ್ ಕಟ್ಟಿಂಗ್ ಶಾಪ್ ಗೆ ಹೋಗಿದ್ರು. ಈ ವೇಳೆ ಕಳ್ಳನೊಬ್ಬ ಬೈಕ್ ನಲ್ಲಿದ್ದ ಹೆಲ್ಮೆಟ್ ಹಾಕಿಕೊಂಡು ಬೈಕ್ ಕಿಕ್ ಹೊಡೆದು ಹೊರಡಲು ಪ್ರಯತ್ನಿಸುತ್ತಿದ್ದರೂ ಪ್ರಯೋಜನ ಆಗದಿದ್ದಾಗ ಬೈಕ್ ದೂಡಿಕೊಂಡು ಹೋಗುತ್ತಿದ್ದ. ಈ ವೇಳೆ ಪಕ್ಕದ ಅಂಗಡಿಯಲ್ಲಿದ್ದ ಲಾಯಿಲ ನಿವಾಸಿ ಗೌತಮ್ ಎಂಬಾತ ಗಮನಿಸಿ ಕಟ್ಟಿಂಗ್ ಶಾಪ್ ಗೆ ಓಡಿಹೋಗಿ ಬೈಕ್ ಮಾಲೀಕರಿಗೆ ಮಾಹಿತಿ ನೀಡಿದ್ದಾನೆ.
ತಕ್ಷಣ ಬೈಕ್ ಮಾಲೀಕ ಬೈಕ್ ಬಳಿ ಬಂದಾಗ ಬೈಕ್ ತಳ್ಳಿಕೊಂಡು ಹೋಗ್ತಿದ್ದ ಕಳ್ಳನನ್ನು ಹಿಡಿದುಕೊಂಡು ವಿಚಾರಿಸಿದ್ರು. ಆಗ ಆತ ಅಲ್ಲಿಂದ ತಪ್ಪಿಸಿಕೊಂಡ. ತಕ್ಷಣ ಬೈಕ್ ಮಾಲೀಕ , ಗೌತಮ್ ಲಾಯಿಲ ಮತ್ತಿತರು ಸೇರಿಕೊಂಡು ಸಂತೆಕಟ್ಟೆ ಬಸ್ ನಿಲ್ದಾಣದವರೆಗೆ ಅಟ್ಟಾಡಿಸಿಕೊಂಡು ಹೋಗಿ ನೆಲಕ್ಕೆ ಉರುಳಿಸಿ ಹಿಡಿದುಕೊಂಡಿದ್ದಾರೆ. ಈ ವೇಳೆ ಇಪ್ಪತ್ತಕ್ಕೂ ಹೆಚ್ಚು ಸಾರ್ವಜನಿಕರು ಸಹಕರಿಸಿ ವಿಚಾರಿಸಿದ್ದಾರೆ. ಕಳ್ಳ ತನ್ನ ಹೆಸರು ವಿಳಾಸದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾನೆ. ಹಾಗೇ ಆತ ಅಮಲು ಪದಾರ್ಥ ಸೇವಿಸಿದ್ದ ಎನ್ನಲಾಗಿದೆ. ನಂತರ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ.
Kshetra Samachara
15/06/2022 07:12 pm