ಮಂಗಳೂರು: ಬಾಬರಿ ಮಸೀದಿ ವಿವಾದದ ಬಳಿಕ ಸಂಘ ಪರಿವಾರಕ್ಕೆ ಜನರಲ್ಲಿ ದ್ವೇಷ ಭಾವನೆ ಕೆರಳಿಸಲು ಈಗ ಜ್ಞಾನವಾಪಿ, ತಾಜ್‌ಮಹಲ್, ಹಿಜಾಬ್ ಇತ್ಯಾದಿ ವಿಚಾರಗಳನ್ನು ಕೈಗೆತ್ತಿಕೊಂಡು ವಿವಾದ ಸೃಷ್ಟಿಸುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಡಾ. ಎಸ್.ಕ್ಯೂ.ಆರ್. ಇಲ್ಯಾಸ್ ಆರೋಪಿಸಿದ್ದಾರೆ.
ಮಂಗಳೂರು ನಗರದ ಕಂಕನಾಡಿ ವೆಲೆನ್ಸಿಯಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಷ್ಟೆಲ್ಲಾ ದ್ವೇಷಕಾರುವ ಕೃತ್ಯ ನಡೆಯುತ್ತಿದ್ದರೂ ಸರಕಾರ ಏನೂ ಕ್ರಮಕೈಗೊಳ್ಳದೆ ಏಕೆ ಮೌನವಾಗಿದೆ? ಇದನ್ನು ತಡೆಯುವುದು ಸರಕಾರದ ಕೆಲಸವಲ್ಲವೇ ಎಂದು ಅವರು ಪ್ರಶ್ನಿಸಿದರು.
ಭಾರತಕ್ಕೆ ಶ್ರೀಲಂಕಾದ ಸ್ಥಿತಿ ಬರುವ ಎಲ್ಲಾ ಸಾಧ್ಯತೆ ಇದೆ. ಬಿಜೆಪಿ ಸರಕಾರವು ಧರ್ಮ, ಕೋಮು ದ್ವೇಷವನ್ನು ಇದೇ ರೀತಿ ಮುಂದುವರೆಸಿದರೆ ಶ್ರೀಲಂಕಾದ ಪರಿಸ್ಥಿತಿ ಭಾರತಕ್ಕೂ ಬರುವ ಆತಂಕ ಕಾಡುತ್ತಿದೆ. ಶ್ರೀಲಂಕಾದಲ್ಲಿ ಮೊದಲು ತಮಿಳಿಯನ್ನರ ಮೇಲೆ, ನಂತರ ಮುಸ್ಲಿಮರ ವಿರುದ್ಧ ದ್ವೇಷ ಭಾವನೆ ಹರಡಿಸಲಾಯಿತು. ಇದರಿಂದಲೇ ಶ್ರೀಲಂಕಾದ ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ಇದೀಗ ಭಾರತದಲ್ಲಿ ನರೇಂದ್ರ ಮೋದಿ ಮತೀಯ ದ್ವೇಷವನ್ನು ಹರಡುತ್ತಿದ್ದಾರೆ. ದೇಶದ ಸಮಸ್ಯೆಗಳು, ನಿರುದ್ಯೋಗ, ಬಡತನದ ಬಗ್ಗೆ ಮಾತನಾಡುತ್ತಿಲ್ಲ. ಶ್ರೀಲಂಕಾ ಗತಿ ಭಾರತಕ್ಕೆ ಬಾರದಿರಲು ಕೂಡಲೆ ಇಂಥ ಕೃತ್ಯಗಳನ್ನು ನಿಲ್ಲಿಸಲಿ ಎಂದು ಇಲ್ಯಾಸ್ ಆಗ್ರಹಿಸಿದರು.
Kshetra Samachara
27/05/2022 06:31 pm