ಮಂಗಳೂರು:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳೆದ 15 ತಿಂಗಳಲ್ಲಿ 324 ಕ್ಕೂ ಅಧಿಕ ಮಹಿಳೆಯರು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಹೌದು. ನಾಲ್ಕೂವರೆ ವರ್ಷಗಳಲ್ಲಿ ಉಭಯ ಜಿಲ್ಲೆಗಳಲ್ಲಿ 679 ಕ್ಕೂ ಅಧಿಕ ಮಹಿಳೆಯರ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, ಬಹುತೇಕ ಮಂದಿ ಪತ್ತೆಯಾಗಿದ್ದಾರೆ. ಈ ಪೈಕಿ ದ.ಕ. ಜಿಲ್ಲೆಯಲ್ಲಿ 35 ಮತ್ತು ಉಡುಪಿ ಜಿಲ್ಲೆಯಲ್ಲಿ 10 ಮಂದಿ ಪತ್ತೆಗೆ ಬಾಕಿ ಇದ್ದಾರೆ.
ಕಾರಣವೇನು?
ಮಹಿಳೆಯರ ನಾಪತ್ತೆಗೆ ವಿಭಿನ್ನ ಕಾರಣಗಳು ಕಂಡು ಬಂದಿವೆ. ಕೌಟುಂಬಿಕ ಕಲಹ, ಪ್ರೇಮ ಪ್ರಕರಣ, ಉದ್ಯೋಗ, ಆಮಿಷ, ಮಾನಸಿಕ ಅಸ್ವಸ್ಥ ಮೊದಲಾದುವು ಪ್ರಮುಖ ಎಂದು ಪೊಲೀಸರು ಮತ್ತು ಆಪ್ತ ಸಮಾಲೋಚಕರು ಗುರುತಿಸಿದ್ದಾರೆ.
ಕೊರೊನಾ ಕಾಲದಲ್ಲಿ ಹೆಚ್ಚು ಬಹುತೇಕ ಪ್ರಕರಣ ಕೊರೊನಾ ಅವಧಿಯಲ್ಲಾಗಿದೆ. 2020 ಮತ್ತು 2021ರಲ್ಲಿ ದ.ಕ. ಜಿಲ್ಲೆಯಲ್ಲಿ 293, ಉಡುಪಿಯಲ್ಲಿ 164 ಮಂದಿ ನಾಪತ್ತೆಯಾಗಿದ್ದರು. ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 2022ರ ಜನವರಿಯಿಂದ ಎಪ್ರಿಲ್ ಅಂತ್ಯದ ವರೆಗೆ 26 ಮಂದಿ, ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 2022ರ ಜನವರಿಯಿಂದ ಫೆಬ್ರವರಿ ಅಂತ್ಯದ ವರೆಗೆ 13 ಮಂದಿ ನಾಪತ್ತೆಯಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 2022ರ ಜನವರಿಯಿಂದ ಎಪ್ರಿಲ್ 10ರ ವರೆಗೆ 32 ಮಂದಿ ನಾಪತ್ತೆಯಾಗಿದ್ದಾರೆ.
ಅವಿವಾಹಿತರೇ ಅಧಿಕ ! ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 2019ರ ಜನವರಿಯಿಂದ 2022ರ ಫೆಬ್ರವರಿ 25ರ ವರೆಗೆ 147 ಮಂದಿ ಅವಿವಾಹಿತೆಯರು ನಾಪತ್ತೆಯಾಗಿದ್ದು ಅವರಲ್ಲಿ 145 ಮಂದಿ ಪತ್ತೆಯಾಗಿದ್ದಾರೆ. 97 ಮಂದಿ ವಿವಾಹಿತೆಯರು ನಾಪತ್ತೆಯಾಗಿದ್ದು ಬಹುತೇಕ ಮಂದಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
Kshetra Samachara
05/05/2022 06:37 pm