ಪಬ್ಲಿಕ್ ನೆಕ್ಸ್ಟ್ ಫಾಲೊಅಪ್
ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು , ಎಡಿಜಿಪಿ ಪ್ರತಾಪ್ ರೆಡ್ಡಿ ಕಣಕ್ಕೆ ಇಳಿದಿದ್ದಾರೆ. ಇನ್ನು ನಿಷೇಧಿತ ಕೀಟನಾಷಕ ಸೇವಿಸಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡರು ಎಂಬುದು ತನಿಖೆಯಿಂದ ಬಯಲಾಗಿದೆ.
ರಾಜ್ಯದ ಅತ್ಯಂತ ಚಾಣಾಕ್ಷ ಅಧಿಕಾರಿ ಎಂದು ಪ್ರಸಿದ್ಧಿ ಪಡೆದಿರುವ ಪ್ರತಾಪ್ ರೆಡ್ಡಿ ಅನೇಕ ಜಟಿಲ ಪ್ರಕರಣಗಳನ್ನು ಭೇದಿಸಿ ಹೆಸರುವಾಸಿಯಾಗಿದ್ದಾರೆ. ನಿಖರ ತನಿಖೆ ನಡೆಸಿ ಕೇಸ್ ಬಿಲ್ಡಪ್ ಮಾಡುವುದರಲ್ಲಿ ಎತ್ತಿದ ಕೈಯಾದ ಪ್ರತಾಪ್ ರೆಡ್ಡಿ, ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸತತ ನಾಲ್ಕು ತಾಸು ಚರ್ಚೆ ನಡೆಸಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ, ಪ್ರಕರಣದಲ್ಲಿ ನಿರ್ದೇಶನಗಳನ್ನು ನೀಡಲು ಬಂದಿದ್ದೇನೆ.ಏಳು ತನಿಖಾ ತಂಡಗಳನ್ನು ಮಾಡಿ ರಾಜ್ಯದ ವಿವಿಧ ಭಾಗಗಳಿಗೆ ಕಳುಹಿಸಲಾಗಿದೆ. ತನಿಖೆಯನ್ನು ಸಮರ್ಪಕ ರೀತಿಯಲ್ಲಿ ಮಾಡಲಾಗುವುದು. ಎಡಿಜಿಪಿ ಆಗಿ ನಾನು ತನಿಖಾ ಅಧಿಕಾರಿಗಳನ್ನು ಮತ್ತು ತಂಡಗಳನ್ನು ಮೇಲುಸ್ತುವಾರಿ ಮಾಡುತ್ತೇನೆ ನನ್ನ ನಿರ್ದೇಶನದಂತೆ ತನಿಖಾ ತಂಡಗಳು ಕೆಲಸ ಮಾಡಲಿವೆ ಅಂತ ಹೇಳಿದ್ದಾರೆ.
ಇನ್ನು ಸಂತೋಷ್ ಆತ್ಮಹತ್ಯೆ ಮಾಡಿಕೊಂಡದ್ದು, ವಿಷ ಪದಾರ್ಥ ಸೇವನೆಯಿಂದ ಅಂತ ಗೊತ್ತಾಗಿದ್ದರೂ ಯಾವ ವಿಷ ಸೇವನೆ ಅಂತ ಗೊತ್ತಾಗಿರ್ಲಿಲ್ಲ. ಅದ್ರೆ ಸದ್ಯ ಪೊಲೀಸರ ತನಿಖೆಯಲ್ಲಿ ನಿಷೇಧಿತ ಮೋನೋಕ್ರೋಟೋಫೋಸ್ ಕೀಟನಾಶಕ ಸೇವಿಸಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಿದೆ.
ಗಿಡಗಳಿಗೆ ಹುಳ ಭಾದೆ ಉಂಟಾಗದಂತೆ ಬಳಸಲಾಗುವ ಮೋನೋಕ್ರೋಟೋಫಾಸ್ ವಿಷ ಮನುಷ್ಯನ ಸಾವಿಗೆ ಕಾರಣವಾಗುತ್ತದೆ.ಇದೇ ಕಾರಣಕ್ಕೆ ಸರಕಾರ ಇದನ್ನು ನಿಷೇಧಿಸಿದೆ. ಸಂತೋಷ್ ಈ ಕೀಟನಾಶಕವನ್ನು ಚಿಕ್ಕಮಗಳೂರಿನಿಂದ ಖರೀದಿ ಮಾಡಿ ಬ್ಯಾಗ್‌ನಲ್ಲಿ ಯಾರಿಗೂ ಗೊತ್ತಾಗದಂತೆ ಇಟ್ಟುಕೊಂಡು ಬಂದಿದ್ದರು. ಬಳಿಕ ರೂಮ್‌ನಲ್ಲಿ ಜ್ಯೂಸ್ ಜೊತೆ ಮಿಕ್ಸ್ ಮಾಡಿ ಸೇವನೆ ಮಾಡಿದ್ದಾರೆ ಎಂಬುದು ಪೊಲೀಸರ ಮಾಹಿತಿಯಿಂದ ತಿಳಿದು ಬಂದಿದೆ..
ಒಟ್ಟಿನಲ್ಲಿ, ಪೊಲೀಸರ ತನಿಖೆ ವೇಗ ಪಡೆದುಕೊಂಡಿದೆ. ನಾನಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.ಪೊಲೀಸ್ ವಶದಲ್ಲಿರುವ ಸ್ನೇಹಿತರನ್ನೇ ಹೆಚ್ಚಾಗಿ ವಿಚಾರಣೆ ಮಾಡಲಾಗುತ್ತಿದೆ.
PublicNext
16/04/2022 08:25 pm