ಮಂಗಳೂರು: ಅತಿ ವೇಗವಾಗಿ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಬೈಕ್ ಸವಾರನ ಸಾವಿಗೆ ಕಾರಣನಾದ ಕಾರು ಚಾಲಕನಿಗೆ ಏಳನೇ ಜೆಎಂಎಫ್ ಸಿ ನ್ಯಾಯಾಲಯ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ಏಳು ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಪ್ರಕಾಶ್ ಎಂಬವರು ಸಹಸವಾರನೊಂದಿಗೆ 2019 ಮಾರ್ಚ್ 10ರಂದು ಕಾರ್ಯಕ್ರಮವೊಂದಕ್ಕೆ ಹೋಗಿ ತಡರಾತ್ರಿ 1.30 ಸುಮಾರಿಗೆ ಮನೆಗೆ ಮರಳುತ್ತಿದ್ದರು. ಆಗ ಉಜ್ಜೋಡಿ ಎಂಬಲ್ಲಿ ಅತ್ಯಂತ ವೇಗವಾಗಿ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿಕೊಂಡು ಬಂದ ಕುಲದೀಪ್ ವಿ. ಎಂಬಾತ ಇವರ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸ್ಕೂಟರ್ ಸವಾರಿಬ್ಬರು ರಸ್ತೆಗೆ ಬಿದ್ದಿದ್ದಾರೆ. ಘಟನೆಯಲ್ಲಿ ಪ್ರಕಾಶ್ ತಲೆ ಹಾಗೂ ದೇಹದ ಇತರ ಭಾಗಕ್ಕೆ ತೀವ್ರವಾದ ಗಾಯವಾಗಿತ್ತು. ಅವರನ್ನು ಕಂಕನಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ರೀತಿ ಸಹಸವಾರ ಪುರುಷೋತ್ತಮ್ ಅವರಿಗೆ ಸಾಮಾನ್ಯ ಗಾಯಗಳಾಗಿದ್ದು ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಕಾಶ್ ಅದೇ ಮಾರ್ಚ್ 20ರಂದು ರಾತ್ರಿ ಮೃತಪಟ್ಟಿದ್ದರು. ಈ ಬಗ್ಗೆ ಮಂಗಳೂರು ಸಂಚಾರಿ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ನಿರೀಕ್ಷಕ ಕೃಷ್ಣಾನಂದ ಜಿ.ನಾಯ್ಕ್ ತನಿಖೆ ನಡೆಸಿದ್ದರು. ಆ ಬಳಿಕ ಪೊಲೀಸ್ ನಿರೀಕ್ಷಕ ಗುರುದತ್ ಕಾಮತ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ 7ನೇ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಆರೋಪಿ ಕುಲದೀಪ್ ವಿ. ತಪ್ಪಿತಸ್ಥನೆಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ಐಪಿಸಿ ಸೆಕ್ಷನ್(279) ತಪ್ಪಿಗೆ 1ಸಾವಿರ ರೂ. ದಂಡ, ತಪ್ಪಿದ್ದಲ್ಲಿ 15 ದಿನಗಳ ಕಾರಾಗೃಹ ಶಿಕ್ಷೆ. ಐಪಿಸಿ ಸೆಕ್ಷನ್(338) ತಪ್ಪಿಗೆ 6 ತಿಂಗಳ ಕಾರಾಗೃಹ ಶಿಕ್ಷೆ, 1000 ರೂ. ದಂಡ, ಡಂಡ ತೆರಲು ತಪ್ಪಿದ್ದಲ್ಲಿ 15 ದಿನಗಳ ಕಾರಾಗೃಹ ಶಿಕ್ಷೆ. ಐಪಿಸಿ ಸೆಕ್ಷನ್(304) ತಪ್ಪಿಗೆ 1 ವರ್ಷ ಸಾಮಾನ್ಯ ಕಾರಾಗೃಹ ಶಿಕ್ಷೆ, 5,000 ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿ ನ್ಯಾಯಾಧೀಶೆ ಪದ್ಮಾ ಎಂ. ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದ ಮೂಡಿಸಿದ್ದಾರೆ.
Kshetra Samachara
02/03/2022 10:26 pm