ಮಂಗಳೂರು: ಭೂ ಪರಿವರ್ತನೆ ಮಾಡಲೆಂದು 5 ಸಾವಿರ ರೂ. ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತ ತಂಡ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಆರೋಪ ಸಾಬೀತುಗೊಂಡ ಹಿನ್ನೆಲೆಯಲ್ಲಿ ಅಪರಾಧಿಗೆ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ 2 ವರ್ಷಗಳ ಸಾದಾ ಸಜೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಬೆಳ್ತಂಗಡಿ ತಾಲೂಕು ಸರ್ವೇಯರ್ ಕಚೇರಿಯಲ್ಲಿದ್ದ ಟಿ.ಪಿ.ಹಿರೇಗೌಡ ಎಂಬಾತ 2013ರಲ್ಲಿ ಭೂ ಪರಿವರ್ತನೆ ಮಾಡಲೆಂದು ಎ.ಕುಟ್ಟಿಚ್ಚ ಮೊಗೇರ ಎಂಬವರಿಗೆ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಆದರೆ ಎ.ಕುಟ್ಟಿಚ್ಚ ಮೊಗೇರರವರು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಟಿ.ಪಿ.ಹಿರೇಗೌಡ ಲಂಚ ಸ್ವೀಕರಿಸುತ್ತಿರುವಾಗಲೇ ಲೋಕಾಯುಕ್ತ ತಂಡ ದಾಳಿ ನಡೆಸಿ ಆರೋಪಿಯನ್ನು ವಶಪಡಿಸಿಕೊಂಡಿತ್ತು.
ಈ ಬಗ್ಗೆ ಲೋಕಯುಕ್ತದ ಅಂದಿನ ಪೊಲೀಸ್ ನಿರೀಕ್ಷಕ ಹಾಗೂ ತನಿಖಾಧಿಕಾರಿ ದಿಲೀಪ್ ಕುಮಾರ್ ಕೆ.ಎಚ್. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ವಿಚಾರಣೆ ನಡೆಸಿ ಆರೋಪಿ ಲಂಚ ತೆಗೆದುಕೊಂಡ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದೆ. ಈ ಬಗ್ಗೆ ನ್ಯಾಯಾಧೀಶ ಬಿ.ಬಿ.ಜಕಾತಿಯವರು ಅಪರಾಧಿಗೆ 2 ವರ್ಷಗಳ ಸಾದಾ ಸಜೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ ಆರು ತಿಂಗಳು ಸಾದ ಸಜೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಮಂಗಳೂರು ಲೋಕಾಯುಕ್ತದ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ವಾದಿಸಿದ್ದಾರೆ.
Kshetra Samachara
02/12/2021 10:17 pm