ಮಂಗಳೂರು: ಸಾವಿರಾರು ವರ್ಷಗಳ ಇತಿಹಾಸವಿರುವ ನಗರದ ಮಂಗಳಾದೇವಿ ಸಮೀಪದ ಗುಜ್ಜರಕೆರೆಯು ಇತ್ತೀಚೆಗಷ್ಟೇ ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿಗೊಂಡಿತ್ತು. ಆದರೆ ಇದೀಗ ಗುಜ್ಜರಕೆರೆಯ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶಗಳು ಇರುವುದು ಲ್ಯಾಬ್ ತಪಾಸಣೆಯಿಂದ ಪತ್ತೆಯಾಗಿದೆ.
ಐತಿಹಾಸಿಕ ಕುರುಹು ಇರುವ ಗುಜ್ಜರಕೆರೆ ಸಾಕಷ್ಟು ವರ್ಷಗಳಿಂದ ಹೂಳು ತುಂಬಿ ಅಭಿವೃದ್ಧಿ ನೆನೆಗುದಿಗೆ ಬಿದ್ದಿತ್ತು. ಹಲವಾರು ವರ್ಷಗಳ ಹೋರಾಟದ ಬಳಿಕ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಕೆರೆ ಪುನರ್ ಅಭಿವೃದ್ಧಿಗೊಂಡು ಸುಂದರಗೊಂಡಿತ್ತು.
ಪ್ರವಾಸಿ ಆಕರ್ಷಣೀಯ ಕೇಂದ್ರವಾಗಿಯೂ, ವಾಯುವಿಹಾರಿಗಳಿಗೆ ನೆಚ್ಚಿನ ತಾಣವಾಗಿ ಮಾರ್ಪಾಡುಗೊಂಡಿತ್ತು. ಆದರೆ ಸಾಕಷ್ಟು ಕೋಟಿ ರೂ. ವೆಚ್ಚದಿಂದ ಗುಜ್ಜರಕೆರೆ ಅಭಿವೃದ್ಧಿಗೊಂಡರೂ, ಕೆರೆಯ ನೀರು ಮಾತ್ರ ಇನ್ನೂ ಬಳಕೆಗೆ ಯೋಗ್ಯವಾಗದೆ ಉಳಿದಿದೆ.
ಈ ಬಗ್ಗೆ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಕಾರ್ಯದರ್ಶಿ ನೇಮು ಕೊಟ್ಟಾರಿ ಮಾತನಾಡಿ, ಗುಜ್ಜರಕೆರೆಯ ನೀರಿನ ಶುದ್ಧತೆಯ ಬಗ್ಗೆ ದೃಢೀಕರಿಸಲು ನಿರಂತರ ನೀರಿನ ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿತ್ತು. ಇದೀಗ ಎಪ್ರಿಲ್ ಕೊನೆಯ ವಾರದಲ್ಲಿ ಮತ್ತೆ ಫಿಶರಿಶ್ ಕಾಲೇಜಿಗೆ ಕಳುಹಿಸಿರುವ ಸ್ಯಾಂಪಲ್ ನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶಗಳಿರುವುದು ಪತ್ತೆಯಾಗಿದೆ. ಈ ನೀರು ಸೇವನೆಗೆ ಯೋಗ್ಯವಾಗಿಲ್ಲ ಎಂದೂ ವರದಿ ಬಂದಿದೆ ಎಂದರು.
ಕೋಟಿ ಕೋಟಿ ರೂಪಾಯಿ ಹಣ ಸುರಿದು ಅಭಿವೃದ್ಧಿಗೊಂಡಿರುವ ಗುಜ್ಜರಕೆರೆಗೆ ಕೊಳಚೆ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶಗಳು ಹೆಚ್ಚಳವಾಗಿದೆ. ಕೆರೆಯನ್ನು ಸಂಪೂರ್ಣ ಮುಚ್ಚಿದ್ದರೂ, ಇನ್ನೂ ಕೊಳಚೆ ನೀರು ನಿರಂತರವಾಗಿ ಕೆರೆಗೆ ಹರಿಯುತ್ತಲೇ ಇದೆ. ಈ ಸಂಪರ್ಕ ಕೊಂಡಿಯನ್ನು ಸ್ಥಗಿತಗೊಳಿಸುವ ಕಾರ್ಯ ಆಗಬೇಕಿದ್ದು, ಮಂಗಳೂರು ಮನಪಾ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಶುದ್ಧೀಕರಿಸುವ ಕೆಲಸ ಆಗಬೇಕಿದೆ ಎಂದು ನೇಮು ಕೊಟ್ಟಾರಿ ಹೇಳಿದರು.
Kshetra Samachara
03/05/2022 01:15 pm