ಉಡುಪಿ: ನಗರದ ಕೋರ್ಟ್ ಹಿಂಭಾಗದಲ್ಲಿದ್ದ ವಕೀಲೆಯ ಮನೆಗೆ ನುಗ್ಗಿದ್ದ ಕಳ್ಳ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ. ಉಡುಪಿ ನಗರ ಠಾಣೆ ಪೊಲೀಸರು ಕೇವಲ 24 ತಾಸಿನೊಳಗೆ ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಪ್ರಕರಣ ಬೇಧಿಸಿದ ಉಡುಪಿ ಪೊಲೀಸರ ಕಾರ್ಯಕ್ಕೆ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಮತ್ತು ಕಳ್ಳತನಕ್ಕೊಳಗಾದ ಮನೆಯ ವಕೀಲೆ ಮೆಚ್ಚುಗೆ ಸೂಚಿಸಿದ್ದಾರೆ.
ಆತ ಖತರ್ನಾಕ್ ಕಳ್ಳ. ತನ್ನ ಪ್ರೇಯಸಿ ನೀಡಿದ ಮಾಹಿತಿಯಂತೆ ವಕೀಲೆಯ ಮನೆಗೇ ನುಗ್ಗಿದ್ದ. ಹಾಡಹಗಲೇ ಮನೆಗೆ ನುಗ್ಗಿದಾತ ಸುಮಾರು 25 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿದ್ದ. ತಕ್ಷಣ ವಕೀಲೆ ವಾಣಿ ವಿ.ರಾವ್ ಪೊಲೀಸರಿಗೆ ದೂರು ನೀಡುತ್ತಾರೆ. ಮನೆಯ ಸುತ್ತಮುತ್ತ ಇದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದ ಪೊಲೀಸರಿಗೆ ಕಳ್ಳನ ಜಾಡು ಬಾಗಲಕೋಟೆಯಲ್ಲಿರುವುದು ಗೊತ್ತಾಗುತ್ತದೆ!
ಕೆಲವು ವರ್ಷಗಳ ಹಿಂದೆ ವಕೀಲೆಯ ಮನೆಯಲ್ಲಿ ಯುವತಿಯೊಬ್ಬಳು ಕೆಲಸಕ್ಕಿದ್ದಳು. ಆಕೆ ಈ ಮನೆಯಲ್ಲಿದ್ದ ಬೆಲೆ ಬಾಳುವ ಚಿನ್ನಾಭರಣಗಳನ್ನು ನೋಡಿ, ಆರೋಪಿ ಪ್ರಿಯತಮನಿಗೆ ಹೇಳಿದ್ದಳು. ಲಾರಿ ಚಾಲಕನಾಗಿರುವ ಆರೋಪಿ ಮುತ್ತಪ್ಪ ಬಸಪ್ಪ ಮಾವರಾಣಿ(27) ಉಡುಪಿಗೆ ಪದೇ ಪದೆ ಬರುತ್ತಿದ್ದ. ತನ್ನ ಪ್ರಿಯತಮೆಯನ್ನು ಭೇಟಿಯಾಗುತ್ತಿದ್ದ. ಈ ಸಂದರ್ಭದಲ್ಲಿ ಪ್ರೇಯಸಿ ಕಳ್ಳತನದ ಪ್ಲ್ಯಾನ್ ರೂಪಿಸಿದ್ದಾಳೆ. ಇದನ್ನು ಕಾರ್ಯರೂಪಕ್ಕೆ ತಂದ ಮುತ್ತಪ್ಪ, ವಕೀಲೆ ಮನೆಯಿಂದ ಕಳ್ಳತನ ಮಾಡಿ ಪರಾರಿಯಾಗಿದ್ದ.
ಆದರೆ, ತನಿಖೆಯ ನೇತೃತ್ವ ವಹಿಸಿದ ಉಡುಪಿ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಅವರ ತಂಡ ಕೇವಲ 24 ತಾಸಿನೊಳಗೆ ಕಳ್ಳ ಮತ್ತು ಆತನ ಪ್ರೇಯಸಿಯ ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ. ಕಳವಾದ ಚಿನ್ನಾಭರಣ ಮತ್ತು ನಗದನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ವಕೀಲೆಗೆ ಉಡುಪಿ ಪೊಲೀಸರು ಶೀಘ್ರ ನ್ಯಾಯ ಒದಗಿಸಿದ್ದಾರೆ. ಪೊಲೀಸರ ಕಾರ್ಯಾಚರಣೆ ಮತ್ತು ಚಾಕಚಕ್ಯತೆಗೆ ವಕೀಲೆ ವಾಣಿ ರಾವ್ ಮತ್ತು ವಕೀಲರ ಸಂಘದ ಅಧ್ಯಕ್ಷರು ಮೆಚ್ಚುಗೆ ಜೊತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Kshetra Samachara
31/07/2022 09:47 am