ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ದೀಪಕ್ ಅಮೀನ್ ಮಾಲಕತ್ವದ ಶ್ರೀ ದುರ್ಗಾ ಜನರಲ್ ಸ್ಟೋರ್ ಗೆ ಮುಂಜಾವ 2.30ಕ್ಕೆ ಕಳ್ಳನೊಬ್ಬ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿ ಸಿನಿಮೀಯ ಮಾದರಿಯಲ್ಲಿ ಪರಾರಿಯಾಗಿ ಪೊಲೀಸರ ಕಾರ್ಯಾಚರಣೆ, ಸ್ಥಳೀಯರ ಸಾಹಸದಿಂದ ಬಂಧಿತನಾಗಿದ್ದಾನೆ.
ಬೆಳಗಿನ ಜಾವವೇ 60ರ ಹರೆಯದ ವ್ಯಕ್ತಿಯೊಬ್ಬ ದೀಪಕ್ ಅಮೀನ್ ಮಾಲಕತ್ವದ ಶ್ರೀ ದುರ್ಗಾ ಜನರಲ್ ಸ್ಟೋರ್ಸ್ ಗೆ ಕಳ್ಳತನಕ್ಕೆ ಬಂದಿದ್ದು, ಬೀಗ ಮುರಿಯುವ ಶಬ್ದದಿಂದ ಅಂಗಡಿಯ ಎದುರು ಬದಿ ಮನೆಯವರು ಎಚ್ಚೆತ್ತು ಕೂಡಲೇ ಅಂಗಡಿ ಮಾಲಕನಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಸ್ಥಳಕ್ಕೆ ಅಂಗಡಿ ಮಾಲಕ ಧಾವಿಸಿದಾಗ ಕಳ್ಳ ಅಂಗಡಿ ಬೀಗ ಮುರಿದು ಒಳಗೆ ಕಳ್ಳತನ ನಡೆಸುತ್ತಿರುವುದನ್ನು ಗಮನಿಸಿ ಕೂಡಲೇ ಶಟರ್ ಎಳೆಯಲು ಯತ್ನಿಸಿದಾಗ, ಕಳ್ಳ ಕಬ್ಬಿಣದ ರಾಡ್ ನಿಂದ ಅಂಗಡಿಯ ಶಟರ್ ಅಡಿಯಿಂದ ದೀಪಕ್ ಗೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಆಗ ದೀಪಕ್ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಳ್ಳ ಪರಾರಿಯಾಗಿದ್ದು, ಹುಡುಕಾಟ ನಡೆಸಿದಾಗ ಬೆಳಗ್ಗೆ 6.30ಕ್ಕೆ ಮುಲ್ಕಿ ಬಸ್ಸು ನಿಲ್ದಾಣ ಬಳಿಯ ಆರಾರ ಟವರ್ಸ್ ಹಿಂಭಾಗದ ಹಾರ್ಡ್ ವೇರ್ ಅಂಗಡಿ ಪಕ್ಕದಲ್ಲಿ ಬಸವಳಿದ ರೀತಿ ಪತ್ತೆಯಾಗಿದ್ದಾನೆ. ಕಳ್ಳನನ್ನು ಸಿನಿಮೀಯ ರೀತಿ ಪೊಲೀಸರು ಸೆರೆ ಹಿಡಿದಿದ್ದಾರೆ. ಆರೋಪಿ ಉತ್ತರ ಕರ್ನಾಟಕದವನಂತೆ ಕಂಡುಬರುತ್ತಿದ್ದಾನೆ. ಆತ ಬೆಳಗ್ಗೆ ಅಂಗಡಿಗೆ ಎರಡು ಮೂರು ಸಲ ಬಂದು ಅನುಮಾನಾಸ್ಪದ ರೀತಿ ಪರಿಶೀಲನೆ ಮಾಡಿ ಹೋಗಿದ್ದಾನೆ ಎಂದು ದೀಪಕ್ ತಿಳಿಸಿದ್ದಾರೆ.
ಆರೋಪಿ ಕಳ್ಳತನಕ್ಕೆ ಯತ್ನಿಸಿದ ಮಾಹಿತಿ ಬಂದ ಕೂಡಲೇ ಅಂಗಡಿ ಇರುವ ಫ್ಯಾಟ್ ನ ರಾತ್ರಿ ಪಾಳಿ ಕಾವಲುಗಾರನಿಗೆ ತಿಳಿಸಿದ್ದರೂ ಆತ ನಿರ್ಲಕ್ಷ್ಯ ವಹಿಸಿದ್ದಾನೆ ಎಂದು ದೀಪಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ಮುಲ್ಕಿ ಬಸ್ ನಿಲ್ದಾಣದ ಮಾರುಕಟ್ಟೆ ರಸ್ತೆಯ ಪ್ರದೀಪ ಎಂಬವರ ಬಟ್ಟೆ ಅಂಗಡಿಯಲ್ಲಿಯೂ ಕಳ್ಳತನಕ್ಕೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಳ್ಳ 3ರಿಂದ 4 ಶರ್ಟ್ ಬದಲಿಸಿಕೊಂಡು ಕಳ್ಳತನಕ್ಕೆ ಯತ್ನ ನಡೆಸಿದ್ದಾನೆ. ಈ ಅಂಗಿಗಳು ಬಪ್ಪನಾಡು ದೇವಳದ ಬಳಿ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Kshetra Samachara
03/12/2020 10:59 am