ಉಡುಪಿ: ರೈಲ್ವೆ ಯಲ್ಲಿ ಉದ್ಯೋಗ ಕೊಡುವುದಾಗಿ ಅಮಾಯಕರನ್ನು ನಂಬಿಸಿ, ಹಣ ಪಡೆದು ವಂಚಿಸುತ್ತಿದ್ದ ನಕಲಿ ಟಿ.ಸಿ. ಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿ ಹೊನ್ನಾವರ ನಿವಾಸಿ ಗಣೇಶ್ ನಾಯ್ಕ್ ಎಂದು ಪೊಲೀಸರು ತಿಳಿಸಿದ್ದಾರೆ. ಈತ
ಅ. 25ರಂದು ತಾನು ಕೊಂಕಣ ರೈಲ್ವೆಯಲ್ಲಿ ಟಿ.ಸಿ. ಆಗಿರುವುದಾಗಿ ಹೇಳಿಕೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಆಗಿರುವ ಮಥಾಯಿಸ್ ಎಂಬವರ ಬಳಿ ಬಂದು ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅವರಿಂದ 20,000 ರೂ. ದಾಖಲೆಪತ್ರ ಪಡೆದು ವಂಚಿಸಿದ್ದಾನೆ.
ಅದೇ ರೀತಿ ಪರ್ಕಳದ ವನಿತಾ ಅವರಿಂದ ಹಣ ಪಡೆದು ನಕಲಿ ನೇಮಕ ಪತ್ರ ನೀಡಿ ಮೋಸ ಮಾಡಲಾಗಿದೆ. ಈ ಬಗ್ಗೆ ಪೊಲೀಸರಿಗೆ
ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ್ದಾರೆ.
ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ , ಉಡುಪಿ ನಗರ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಶಕ್ತಿವೇಲು ಇ. ಮತ್ತು ವಾಸಪ್ಪ ನಾಯ್ಕ ಹಾಗೂ ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚಿಸಿ, ವಂಚಕನನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ರೈಲ್ವೆ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್ ಗಾಂವ್ಕರ್ ಹಾಗೂ ಸಿಬ್ಬಂದಿ ಸಹಕರಿಸಿದ್ದರು.
Kshetra Samachara
11/11/2020 08:49 am