ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೊಲ್ನಾಡು ಜಂಕ್ಷನ್ ಬಳಿ ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಾಳು ಸ್ಕೂಟರ್ ಸವಾರನನ್ನು ಹಳೆಯಂಗಡಿ ಕೋಳಿ ಅಂಗಡಿಯಲ್ಲಿ ಕೆಲಸಕ್ಕಿರುವ ಮೂಲತ ಪುತ್ತೂರು ಮುಕ್ವೆ ನಿವಾಸಿ ಹಿಯಾಝ್(21) ಎಂದು ಗುರುತಿಸಲಾಗಿದೆ. ಹಿಯಾಝ್ ಹಳೆಯಂಗಡಿಯಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಸ್ಕೂಟರ್ ಚಲಾಯಿಸಿಕೊಂಡು ಕೊಲ್ನಾಡು ಜಂಕ್ಷನ್ನಲ್ಲಿ ತಿರುವು ಪಡೆಯುತ್ತಿದ್ದಾಗ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬಿ ಎಂ ಡಬ್ಲ್ಯೂ ಕಾರು (ಕೆಎ 19 ಎಂಕೆ 37 72) ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ಚಾಲಕ ಸಿನಿಮೀಯ ಮಾದರಿಯಲ್ಲಿ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾನೆ.
ಈ ಸಂದರ್ಭ ಸ್ಥಳೀಯರಾದ ನಯನ್, ರಿಕ್ಷಾ ಚಾಲಕ ಜಬ್ಬರ್ ಮತ್ತಿತರರು ಗಾಯಾಳು ಆಸ್ಪತ್ರೆಗೆ ಸಾಗಿಸಲು ನೆರವಾದರು. ಕಾರಿನಲ್ಲಿ ಇಬ್ಬರು ಯುವಕರು ಮತ್ತು ಯುವತಿಯರು ಇದ್ದು ಚಾಲಕ ಮದ್ಯ ಸೇವಿಸಿ ಚಲಾಯಿಸುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಕುಂದಾಪುರದ ಮರವಂತೆಯಿಂದ ಜಾಲಿ ಮೂಡ್‌ನಲ್ಲಿ ಯದ್ವಾತದ್ವಾ ಕಾರು ಚಲಾಯಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ
Kshetra Samachara
19/09/2021 10:01 pm