ಧಾರವಾಡ: ರಾಷ್ಟ್ರೀಯ ಹೆದ್ದಾರಿ 63ರ ಧಾರವಾಡ ಜಿಲ್ಲೆಯ ಕಲಘಟಗಿ ಬಳಿ ಕಾರಿಗೆ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮುಲ್ಕಿ ಮೂಲದ ಇಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಮುಲ್ಕಿ ಸಮೀಪದ ಕೆ.ಎಸ್. ರಾವ್ ನಗರದ ಲಿಂಗಪ್ಪಯ್ಯಕಾಡಿನ ಶಿವಾನಂದ ತಲ್ವಾರ್ (24) ಹಾಗೂ ಬೈಕಂಪಾಡಿಯಲ್ಲಿ ನೆಲೆಸಿರುವ ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ನಾಗರಾಜ್ (30) ಎಂದು ಗುರುತಿಸಲಾಗಿದೆ.
ಕಾರಿನಲ್ಲಿದ್ದ ಇನ್ನೋರ್ವ ಗಾಯಾಳು ಲಿಂಗಪ್ಪಯ್ಯಕಾಡು ನಿವಾಸಿ ಚಂದ್ರಕಾಂತ ಹೂಗಾರ್ (30) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಂದ್ರಕಾಂತ ಹೂಗಾರ್ ತಮ್ಮ ಕಾರಿನಲ್ಲಿ ತಮ್ಮ ಮಿತ್ರರಾದ ಶಿವಾನಂದ ತಲ್ವಾರ್ ಮತ್ತು ನಾಗರಾಜ ಅವರನ್ನು ಕರೆದುಕೊಂಡು ಸವದತ್ತಿ ಎಲ್ಲಮ್ಮನ ಜಾತ್ರೆಗೆ ಹೊರಟಿದ್ದರು.
ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಮಂಗಳೂರು ಕಡೆಗೆ ಬರುತ್ತಿದ್ದ ಬಸ್ಸಿನ ಚಾಲಕನ ಅಜಾಗರೂಕತೆಯಿಂದ ಬಸ್ಸು, ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ತೀವ್ರ ಜಖಂಗೊಂಡಿದ್ದು ಚಾಲಕ ಶಿವಾನಂದ ಸ್ಥಳದಲ್ಲಿಯೇ ಮೃತಪಟ್ಟರೆ ನಾಗರಾಜ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತ ಇಬ್ಬರು ಯುವಕರು ಅವಿವಾಹಿತರಾಗಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಇಂದು ಸಂಜೆ ವೇಳೆಗೆ ಮೃತದೇಹಗಳು ಮುಲ್ಕಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಮಿತ್ರ ಶಿವಾನಂದ ಆರ್. ಕೆ. ತಿಳಿಸಿದ್ದಾರೆ. ಕಲಘಟಗಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
Kshetra Samachara
28/02/2021 04:01 pm