ಮಂಗಳೂರು: ತುಳು ಚಿತ್ರ ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಅವರನ್ನ ನಾನೇ ಕೊಲೆ ಮಾಡಿದ್ದು ಎಂದು ಆರೋಪಿ ಸತೀಶ್ ಕುಲಾಲ್ ಎಂಬಾತ ಪೊಲೀಸರಿಗೆ ಆಡಿಯೋ ಕಳುಹಿಸಿದ್ದಾನೆ.
ಪೊಲೀಸರಿಗೆ ಆಡಿಯೋ ಕಳುಹಿಸಿಕೊಟ್ಟಿರುವ ಆರೋಪಿ ಸತೀಶ್ ಕುಲಾಲ್, 'ನಮಸ್ತೆ ನಾನು ಸತೀಶ್. ನಿನ್ನೆ ರಾತ್ರಿ ವಸ್ತಿ ಅಪಾರ್ಟ್ ಮೆಂಟ್‌ನಲ್ಲಿ ಸುರೇಂದ್ರನ ಹತ್ಯೆಯಾಗಿದೆ. ಇದನ್ನು ನಾನೇ ಮಾಡಿದ್ದು. ಇದು ಕಿಶನ್ ಹೆಗ್ಡೆ ಸಾವಿನ ಪ್ರತೀಕಾರ. ಸುರೇಂದ್ರ ಬಡ್ಡಿ ವ್ಯವಹಾರ ಮಾಡಿ ಇಂತಹ ಪಾಪದ ಜನರ ಸಾವಿಗೆ ಉಪಯೋಗಿಸುತ್ತಿದ್ದ. ನಾನು 22 ವರ್ಷದಿಂದ ಸುರೇಂದ್ರನ ಒಟ್ಟಿಗೆ ಇದ್ದವನು. ಅವನ ಎಲ್ಲ ಅವ್ಯವಹಾರಗಳು ಗೊತ್ತಿತ್ತು. ಮೊನ್ನೆ ನಡೆದ ಕಿಶನ್ ಹೆಗ್ಡೆ ಕೊಲೆಯಲ್ಲಿ ಇವನು ಹಣದ ಸಹಾಯ ಮಾಡಿದ್ದ ವಿಷಯ ನನಗೆ ತಿಳಿದಿತ್ತು' ಎಂದು ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.
'ನೀನು ತಪ್ಪು ಮಾಡ್ತಾ ಇದ್ದೀಯ ಅಂತ ಸುರೇಂದ್ರಗೆ ಹೇಳಿದ್ದೆ. ಆದ್ರೆ ಆತ ಇದು ನಿನಗೆ ಬೇಡದ ವಿಷಯ. ಆಗ ಈ ವಿಷಯ ಹೊರಗಡೆ ಹೇಳಿದ್ರೆ ನಿನ್ನನ್ನು ಸಾಯಿಸುತ್ತೇನೆ ಅಂತ ಬೆದರಿಕೆ ಹಾಕಿದ್ದ. ಮೊನ್ನೆ ಅನಾಮಿಕನಿಗೆ ಕರೆ ಮಾಡಿ ಜೈಲಿನಲ್ಲಿರೋ ಮನೋಜನಿಗೆ ಹಣ, ಬಟ್ಟೆ ಕೊಡಬೇಕಿದೆ. ಇದಕ್ಕೆ ನಿಮ್ಮ ಸಹಾಯ ಬೇಕು ಅಂತ ಹೇಳುತ್ತಿದ್ದ. ಮತ್ತೊಂದು ದಿನ ಅವರಿಗೆ ಕರೆ ಮಾಡಿ ಬಟ್ಟೆ, ಹಣ ತಲುಪಿಸಿದ್ದೇನೆ. ಸಹಾಯ ಮಾಡಿದ್ದಕ್ಕಾಗಿ ಥ್ಯಾಂಕ್ಸ್ ಅಂತ ಹೇಳಿದ್ದನ್ನು ನಾನು ಕೇಳಿದ್ದೇನೆ' ಎಂದು ಸತೀಶ್ ಕುಲಾಲ್ ಹೇಳಿದ್ದಾರೆ.
'ಈ ವಿಚಾರದಲ್ಲಿ ನಾನು ಕಿಶನ್ ಜೊತೆ ಇದ್ದ ನನ್ನ ಗೆಳೆಯನಿಗೆ ಕರೆ ಮಾಡಿ ತಿಳಿಸಿದೆ. ಅವನಿಗೆ ಈ ವಿಚಾರದಲ್ಲಿ ಕೋಪ ಮತ್ತು ಬೇಸರ ಕೂಡ ಇತ್ತು. ಇವನು ಇದೇ ರೀತಿ ಇದ್ದರೆ ಸುರೇಂದ್ರ ಮತ್ತು ಕೋಡಿಕೆರೆ ಮನೋಜನಿಂದ ಹಲವು ಯುವಕರ ಕೊಲೆಯಾಗುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ನಾವು ಈ ಕೊಲೆ ಮಾಡಿದ್ದೇವೆ. ನಾವೀಗ ಕಾರವಾರದಲ್ಲಿದ್ದೇವೆ. ನಮಗೆ ಏನು ಮಾಡಬೇಕೆಂದು ತೋಚದೆ ಇಲ್ಲಿಗೆ ಬಂದಿದ್ದೇವೆ. ಇನ್ನೊಂದೆರಡು ದಿವಸದಲ್ಲಿ ಪೊಲೀಸರಿಗೆ ಶರಣಾಗತ್ತೇವೆ' ಎಂದು ತಪ್ಪೋಪ್ಪಿಕೊಂಡಿದ್ದಾರೆ.
Kshetra Samachara
22/10/2020 04:15 pm