ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಸಾವಿರಾರು ಮೌಲ್ಯಗಳ ಸೊತ್ತು ಕಳವಾಗಿದೆ.
ಮುಲ್ಕಿ - ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಚರಂತಿಪೇಟೆ ಬಳಿ ಸತೀಶ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಸಣ್ಣಪುಟ್ಟ ಕಳ್ಳತನ ನಡೆಸಿದ್ದಾರೆ.
ಸತೀಶ್, ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಮನೆಗೆ ಹಾನಿ ಆದ ಕಾರಣ ಮನೆಗೆ ಬೀಗ ಹಾಕಿ ಪಡುಪಣಂಬೂರು ಸಮೀಪ ಬೆಳ್ಳಾಯರು ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಹಗಲಿನಲ್ಲಿ ಬಂದುಹೋಗುತ್ತಿದ್ದರು. ಬಳಿಕ ಕಳ್ಳರು ಸಮೀಪದಲ್ಲಿದ್ದ ಪ್ರಕಾಶ್ ಜ್ಯುವೆಲರಿಯ ಹಿಂಭಾಗದ ಗೋಡೆಯ ಎಕ್ಸಾಸ್ಟ್ ಫ್ಯಾನ್ ನ್ನು ಒಡೆದು ಕಬ್ಬಿಣದ ಏಣಿ ಮೂಲಕ ಒಳಗೆ ನುಗ್ಗಿ ಸುಮಾರು 80 ಸಾವಿರ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಸಾಮಗ್ರಿ ಕಳವು ಮಾಡಿದ್ದಾರೆ.
ಕಳ್ಳರು ಗೋಡೆ ಒಡೆದು ಒಳಗೆ ಬಂದ ರೀತಿ ಭಯಾನಕವಾಗಿ ಗೋಚರಿಸುತ್ತಿದೆ ಎಂದು ಜ್ಯುವೆಲ್ಲರಿ ಅಂಗಡಿ ಮಾಲೀಕ ಸಂತೋಷ್ ಸಾಂಗ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಕಳ್ಳರು ಮೊದಲು ಸತೀಶ್ ಅವರ ಮನೆ ಬಾಗಿಲು ಮುರಿದು ಜಾಲಾಡಿದ್ದು, ಏನೂ ಸಿಗದೆ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಚರಂತಿಪೇಟೆ ಮಿಲ್ಲಿನ ಅಂಗಡಿ ಬಳಿ ಸಿಸಿ ಕ್ಯಾಮೆರಾ ಇದ್ದು, ಮುಲ್ಕಿ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಶನಿವಾರ ರಾತ್ರಿ ಕಾರ್ನಾಡು ನಾರಾಯಣ ಗುರು ಆಸ್ಪತ್ರೆ ಬಳಿಯ ಫ್ಲ್ಯಾಟ್ ಕೆಳಗಡೆ ನಿಲ್ಲಿಸಿದ ಸ್ಕೂಟರ್ ಕೂಡ ಕಳವಾಗಿದೆ. ಶನಿವಾರ ರಾತ್ರಿ ನಡೆದ ಸರಣಿ ಕಳ್ಳತನ ಮುಲ್ಕಿ ಜನತೆಯನ್ನು ಭಯಭೀತರನ್ನಾಗಿಸಿದೆ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲ ತಿಂಗಳಿಂದ ಅನೇಕ ಕಳ್ಳತನ ನಡೆದಿದ್ದು, ಇದುವರೆಗೂ ಪೊಲೀಸರು, ಕಳ್ಳರ ಪತ್ತೆ ಹಚ್ಚಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
18/10/2020 06:28 pm