ಕಾರ್ಕಳ: ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆಯಲ್ಲಿ ಶಾಂಭವಿ ನದಿ ದಡದಲ್ಲಿ ಹಿಂದೂ ರುದ್ರ ಭೂಮಿಯ ಸಮೀಪ ಸ.ನಂ. 291 ಮತ್ತು 292ರಲ್ಲಿರುವ ಸರಕಾರಿ ಜಮೀನಿನಲ್ಲಿರುವ ಮರಗಳನ್ನು ಅ.4ರಂದು ಯಾರೋ ವ್ಯಕ್ತಿಗಳು ಜೆಸಿಬಿ ಯಂತ್ರದ ಮೂಲಕ ಕೆಡವಿ, ಜಮೀನನ್ನು ಸಮತಟ್ಟು ಮಾಡಿ, ಸುಮಾರು 3-4 ಎಕ್ರೆಗೂ ಮಿಕ್ಕಿ ಸರಕಾರಿ ಜಮೀನನ್ನು ಅತಿಕ್ರಮಣ ಮಾಡಿದ್ದು, ಕೂಡಲೇ ಸ್ಥಳ ತನಿಖೆ ನಡೆಸಿ, ಈ ಅತಿಕ್ರಮಣ ತಡೆದು ಸರಕಾರಿ ಜಮೀನನ್ನು ಅತಿಕ್ರಮಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಚ್ಚೇರಿಪೇಟೆ ಸಂತೋಷ್ ಶೆಟ್ಟಿ ಎಂಬವರು ಉಡುಪಿ ಜಿಲ್ಲಾಧಿಕಾರಿಯವರಿಗೆ, ಕಾರ್ಕಳ ತಹಶೀಲ್ದಾರರಿಗೆ ಹಾಗೂ ಮುಂಡ್ಕೂರು ಪಿಡಿಒ ಮತ್ತು ಗ್ರಾಮಕರಣಿಕರಿಗೆ ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ತಹಶೀಲ್ದಾರರು, ಕೂಡಲೇ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸ್ಥಳೀಯಾಡಳಿತಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.
ಆದರೆ, ಆ ವ್ಯಕ್ತಿಗಳು ಮತ್ತೆ ಅ. 10ರಂದು ಆ ಜಮೀನಿನಲ್ಲಿ ಕಾಮಗಾರಿ ಆರಂಭಿಸಿ, ಪೈಪ್‌ಲೈನ್ ಅಳವಡಿಸಿ ಅಡಿಕೆ ಗಿಡ ನೆಡುತ್ತಿದ್ದು, ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
2014ರಲ್ಲಿ ಇದೇ ಸರಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳು ತಮ್ಮ ಪಟ್ಟಾ ಜಾಗವೆಂದು ನಂಬಿಸಿ ಕೆಲವೊಂದು ಕುಟುಂಬಗಳಿಗೆ ಮಾರಿದ್ದು, ಆ ಬಡ ಕುಟುಂಬಗಳು ನಿವೇಶನಕ್ಕಾಗಿ ಅಡಿಪಾಯ ಹಾಕಿ, ಮುಕ್ತಾಯ ಹಂತದಲ್ಲಿರುವ ಮನೆಗಳನ್ನೂ ಕೂಡ ಸಂಬಂದಿತ ಇಲಾಖೆ ಕೆಡವಿ ಹಾಕಿತ್ತು. ನಂತರ ಸಾರ್ವಜನಿಕರ ಗಮನಕ್ಕಾಗಿ ಇಲಾಖೆಯು ಜಮೀನಿನಲ್ಲಿ ಸರಕಾರಿ ಜಾಗವೆಂದು ಬೋರ್ಡ್ ಕೂಡ ಹಾಕಲಾಗಿತ್ತು ಎನ್ನಲಾಗಿದೆ.
Kshetra Samachara
11/10/2020 07:56 pm