ಸುಳ್ಯ: ತಮ್ಮ ಮೊದಲ ನಿರ್ದೇಶನದ ಸಿನಿಮಾ '777 ಚಾರ್ಲಿ' ಮೂಲಕ ಕಿರಣ್‌ರಾಜ್ ಕೆ. ಅವರು ಭಾರತ ಚಿತ್ರರಂಗವನ್ನು ತಮ್ಮತ್ತ ಹುಬ್ಬೇರಿಸಿ ನೋಡುವಂತೆ ಮಾಡಿದ್ದಾರೆ. ಸಿನಿಮಾ ಜಗತ್ತಿನ ಸಿನಿ ಪ್ರಿಯರ ಮನಗೆದ್ದು ಮುನ್ನುಗ್ಗುತ್ತಿದ್ದರೆ, ಅದು ಸುಳ್ಯಕ್ಕೂ ಹೆಮ್ಮೆ. ಕಾರಣ ಕಿರಣ್‌ರಾಜ್ ಅವರಿಗೂ ಸುಳ್ಯಕ್ಕೂ ಅವಿನಾಭಾವ ಸಂಬಂಧ. ಕಾಸರಗೋಡಿನಲ್ಲಿ ಹುಟ್ಟಿ ಬೆಳೆದು ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ಕಿರಣ್‌ರಾಜ್ ಅವರ ತಂದೆ ದಿ. ಅಚ್ಚುತ ಮಣಿಯಾಣಿ ಸುಳ್ಯ ಕೇರ್ಪಳದವರು. ತಾಯಿ ಗೋದಾವರಿ ಕಾಸರಗೋಡಿನವರು.
ಸುಳ್ಯ ಕೇರ್ಪಳದವರಾದ ಅಚ್ಚುತ ಮಣಿಯಾಣಿ ಅವರು ವಿವಾಹದ ಬಳಿಕ ಕುಟುಂಬ ಸಮೇತ ಕಾಸರಗೋಡಿನ ಮಲ್ಲಮೂಲೆಯಲ್ಲಿ ನೆಲೆಸಿದರು. ಕಿರಣ್ ರಾಜ್ ಕಾಸರಗೋಡಿನಲ್ಲಿ ಹುಟ್ಟಿ ಬೆಳೆದರೂ ಅವರ ಅಜ್ಜಿ ಮನೆ ಸುಳ್ಯದ ಕೇರ್ಪಳ. ಆದುದರಿಂದಲೇ ಸುಳ್ಯದೊಂದಿಗೆ ಇವರ ಸಂಬಂಧ
ಕಿರಣ್ ರಾಜ್ ಕೆ. ಮತ್ತು ಸಂಪರ್ಕ ಗಟ್ಟಿಯಾದುದು. ಕಿರಣ್ ರಾಜ್ ಅವರ ಚಿಕ್ಕಪ್ಪ ನಾರಾಯಣ ಮಣಿಯಾಣಿ ಹಾಗೂ ಕುಟುಂಬಸ್ಥರು ಕೇರ್ಪಳದ ಕುರುಂಜಿಗುಡ್ಡೆಯಲ್ಲಿ ನೆಲೆಸಿದ್ದಾರೆ. ಅವರ ಮಾವ ನಾರಾಯಣ ಮಲ್ಲಮೂಲೆ ಹಾಗು ಕುಟುಂಬ ಕೂಡ ಸುಳ್ಯದಲ್ಲಿ ನೆಲೆಸಿದ್ದಾರೆ. ಕುಟುಂಬದ ಕಾರ್ಯಕ್ರಮಗಳಿಗೆ ಸುಳ್ಯಕ್ಕೆ ನಿರಂತರ ಬರುತ್ತಾ ಇರುತ್ತಾರೆ.
ಸುಳ್ಯ ಎಂದರೆ ಸುಂದರ ನೆನಪು: ಕಿರಣ್‌ರಾಜ್
ಸುಳ್ಯ ಎಂದರೆ ನನ್ನ ಅಜ್ಜಿಮನೆ, ಸುಳ್ಯ ಎಂದರೆ ಮನಸ್ಸಿಗೆ ಓಡೋಡಿ ಬರುವುದು ಸುಂದರವಾದ ಬಾಲ್ಯದ ನೆನಪುಗಳು ಎನ್ನುತ್ತಾರೆ ಕಿರಣ್‌ರಾಜ್. ಕಾಸರಗೋಡಿನಲ್ಲಿ ನೆಲೆಸಿದ್ದರೂ ಶಾಲಾ ರಜೆಯ ದಿನಗಳನ್ನು ಸುಳ್ಯದಲ್ಲಿ ಕಳೆಯುತ್ತಿದ್ದೆ. ಪೇಟೆಗೆ ಹತ್ತಿರ ಇದ್ದ ಕಾರಣ ಸುಳ್ಯದ ಅಜ್ಜಿಮನೆಗೆ ಬರುವುದು ಎಂದರೆ ಸಂಭ್ರಮ. ರಜಾ ದಿನಗಳಲ್ಲಿ ಪಯಸ್ವಿನಿ ನದಿಯಲ್ಲಿ ಈಜಾಡುವುದು, ಕೆವಿಜಿ ಕ್ಯಾಂಪಸ್ ಬಳಿ ಸುತ್ತಾಡುವುದು, ಸಂತೋಷ್ ಚಿತ್ರಮಂದಿರದಲ್ಲಿ ಸಿನಿಮಾ ನೋಡುವುದು ಅತೀ ಹೆಚ್ಚು ಖುಷಿ ಕೊಡುವ ವಿಚಾರವಾಗಿತ್ತು. ಸಂತೋಷ್ ಸಿನಿಮಾ ಮಂದಿರದಲ್ಲಿ ಟೈಗರ್ ಪ್ರಭಾಕರ್ ಮತ್ತಿತರ ನಾಯಕರ ಸಿನಿಮಾ ನೋಡಿದ ನೆನಪುಗಳು ಹಸುರಾಗಿವೆ. ಈಗ ಅದೇ ಥಿಯೇಟರ್‌ನಲ್ಲಿ ನಾನು ನಿರ್ದೇಶಿಸಿದ ಚಾರ್ಲಿ ಸಿನಿಮಾ ಪ್ರದರ್ಶನಗೊಳ್ಳುತಿದೆ ಎಂದು ತಿಳಿದು ಸಂತೋಷವಾಯಿತು ಎಂದು ಕಿರಣ್‌ರಾಜ್ ಪ್ರತಿಕ್ರಿಯಿಸಿದ್ದಾರೆ.
PublicNext
25/06/2022 08:58 am