ಮಣಿಪಾಲ: ಕೋವಿಡ್ ಗಾಗಿ ತೆಗೆದುಕೊಳ್ಳುವ ಕೋವಿಶೀಲ್ಡ್ ವ್ಯಾಕ್ಸಿನ್‌ನಿಂದ ಪುರುಷರ ಫಲವತ್ತತೆಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ವೀರ್ಯದ ಗುಣಮಟ್ಟದಲ್ಲೂ ಯಾವುದೇ ಬದಲಾವಣೆಯಾಗುವುದಿಲ್ಲ ಎಂಬುದು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಭಾರತೀಯ ಫರ್ಟಿಲಿಟಿ ತಜ್ಞರ ತಂಡವೊಂದು ಈ ಕುರಿತು ಮೊದಲ ಬಾರಿ ನಡೆಸಿದ ಪೈಲಟ್ ಅಧ್ಯಯನದಲ್ಲಿ ಸಾಬೀತಾಗಿದೆ.
ಈ ಕುರಿತ ಸಂಶೋಧನಾ ವರದಿ ಇಂಗ್ಲೆಂಡ್ ಮೂಲದ ಸೊಸೈಟಿ ಫಾರ್ ರಿಪ್ರೊಡಕ್ಷನ್ ಆ್ಯಂಡ್ ಫರ್ಟಿಲಿಟಿಯ ಅಧಿಕೃತ ಜರ್ನಲ್‌ನ ಸೆ.5ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಕೋವಿಶೀಲ್ಡ್ ವ್ಯಾಕ್ಸಿನ್ ತೆಗೆದುಕೊಂಡ ಪುರುಷನ ವೀರ್ಯದ ಗುಣಮಟ್ಟದಲ್ಲಿ, ಸಂಖ್ಯೆ, ಚಲನೆಯ ಗುಣ, ಲೈಂಗಿಕತೆ ಯಾವುದೂ ಬದಲಾಗದಿರುವುದು ಸಂಶೋಧನೆ ವೇಳೆ ಕಂಡುಬಂದಿದೆ. ಇದಕ್ಕೆ ವ್ಯತಿರಿಕ್ತವಾದ ಯಾವುದೂ ಕಂಡುಬಂದಿಲ್ಲ ಎಂದು ಪ್ರಕಟಣೆ ಹೇಳಿದೆ.
ಸಂಶೋಧನೆಗಾಗಿ 53 ಮಂದಿಯ ವೀರ್ಯವನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ. ವ್ಯಾಕ್ಸಿನ್‌ನ ಮೊದಲ ಡೋಸ್ ತೆಗೆದುಕೊಳ್ಳುವ ಮೊದಲು ಅವರ ವೀರ್ಯವನ್ನು ಪರೀಕ್ಷೆಗಾಗಿ ತೆಗೆದುಕೊಂಡಿದ್ದರೆ, ವ್ಯಾಕ್ಸಿನೇಷನ್ ಆದ ಎರಡು ತಿಂಗಳ ನಂತರ ಮತ್ತೊಮ್ಮೆ ವೀರ್ಯದ ಗುಣಮಟ್ಟವನ್ನು ಪರೀಕ್ಷಿಸಲಾಗಿದೆ. ಕೋವಿಡ್-19ಕ್ಕೆ ಪಾಸಿಟಿವ್ ಬಂದ ಅಥವಾ ಕೋವಿಡ್‌ನ ಗುಣಲಕ್ಷಣ ಕಂಡುಬಂದ ವ್ಯಕ್ತಿಗಳನ್ನು ಅಧ್ಯಯನಕ್ಕೆ ಪರಿಗಣಿಸಲಿಲ್ಲ ಎಂದು ವರದಿ ತಿಳಿಸಿದೆ.
ಅಧ್ಯಯನಕ್ಕಾಗಿ ಆಯ್ಕೆ ಮಾಡಿದ 53 ಮಂದಿಯೂ ಎರಡು ಡೋಸ್ ವ್ಯಾಕ್ಸಿನ್‌ನ್ನು ಸ್ವೀಕರಿಸಿದ್ದಾರೆ. ಇವರಲ್ಲಿ ಅರ್ಧದಷ್ಟು ಮಂದಿಯ ವೀರ್ಯದ ಗುಣಮಟ್ಟ ಡಬ್ಲ್ಯುಎಚ್‌ಓ ನಿಗದಿ ಪಡಿಸಿದ ಮಟ್ಟಕ್ಕಿಂತ ಕೆಳಗಿದ್ದರೂ, ವ್ಯಾಕ್ಸಿನ್ ಪಡೆದ ನಂತರವೂ ಅದರಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
Kshetra Samachara
13/09/2022 02:50 pm