ವಿಶೇಷ ವರದಿ: ರಹೀಂ ಉಜಿರೆ
ಉಡುಪಿ : ಕೆಲವು ಹೋಟೆಲ್‌ಗಳು, ಭಾವನಾತ್ಮಕ ಅನುಭವ ನೀಡುತ್ತವೆ. ಆಪ್ತತೆ ಮೂಡಿಸುತ್ತವೆ.ಇಂತಹದ್ದೇ ಆಪ್ತ ಭಾವನೆ ಮೂಡಿಸಿ ಮನೆ ಊಟ ಬಡಿಸುತ್ತಿರುವ ಹೊಟೇಲೊಂದಿದೆ.ಇಲ್ಲಿ ಊಟ ಬಡಿಸುವವರು ಅಜ್ಜ ಅಜ್ಜಿ. ಇವರ ಕೈತುತ್ತಿಗೆ ಫಿದಾ ಆದ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಜನರಿಗೂ ಮಹಾನಗರಗಳು ಸಾಕಾಗಿದೆ. ಅಲ್ಲಿನ ಹೊಟೇಲು ಊಟವೂ ಬೋರು.ಅಂಥವರಿಗಾಗಿಯೇ ಸಿದ್ಧಗೊಂಡಿದೆ ಪರ್ಕಳದ ಅಜ್ಜ ಅಜ್ಜಿ ಹೊಟೇಲ್. ಕಳೆದ ಹಲವು ದಶಕಗಳಿಂದ ಇಲ್ಲಿ ಅಜ್ಜ ಅಜ್ಜಿ ಊಟ ಬಡಿಸುತ್ತಿದ್ದರೂ ಕೊರೋನಾ ನಂತರ ಈ ಹೊಟೇಲಿಗೆ ಸಖತ್ ಡಿಮಾಂಡ್ ಕುದುರಿದೆ. ಇಲ್ಲಿ 50 ರೂಪಾಯಿಗೆ ಹೊಟ್ಟೆ ತುಂಬ ಊಟ ಸಿಗುತ್ತದೆ. ಸದ್ಯ ಈ ಹೋಟೆಲ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. ಬಾಳೆ ಎಲೆಯಲ್ಲಿ, ಕುಚ್ಚಲಕ್ಕಿ ಅನ್ನ ದಾಲ್, ರಸಂ, ಉಪ್ಪಿನಕಾಯಿ ಪಲ್ಯ ಸಲಾಡ್ ಮೊಸರು, ಮಜ್ಜಿಗೆ, ಸಂಡಿಗೆ ಹೀಗೆ ವಿವಿಧ ಭಕ್ಷ್ಯಗಳನ್ನು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಬಡಿಸಿದಂತೆ ಪ್ರೀತಿಯಿಂದ ಬಡಿಸುತ್ತಾರೆ ಅಜ್ಜ ಗೋಪಾಲಕೃಷ್ಣ ಪ್ರಭು ಹಾಗೂ ಅಜ್ಜಿ ವಸಂತಿ ಪ್ರಭು.
ಇನ್ನು, ಅಜ್ಜ ಅಜ್ಜಿ ಮನೆ ಊಟದ ರುಚಿ ಸವಿಯಲು ದಿನ ನಿತ್ಯ ನೂರಾರು ಖಾಯಂ ಗ್ರಾಹಕರ ಸಹಿತ ಉನ್ನತ ಉದ್ಯೋಗದಲ್ಲಿ ಇರುವವರು ಬರ್ತಾರೆ. ಆಹಾರ ಪ್ರಿಯರೊಬ್ಬರು ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ವೀಕ್ಷಣೆಯಾಗಿ, ಈಗ ಮತ್ತಷ್ಟು ಮಂದಿ ಅಜ್ಜ ಅಜ್ಜಿಯ ಕೈ ರುಚಿ ಸವಿಯಲು ಧಾವಿಸುತ್ತಿದ್ದಾರೆ.ಇಲ್ಲಿ ಹೊಟ್ಟೆ ತುಂಬಾ ಊಟ ಜೊತೆಗೆ ಅಜ್ಜ ಅಜ್ಜಿಯ ಮುಗ್ದ ಮಾತು, ಅಕ್ಕರೆಯ ಪ್ರೀತಿಯೂ ಉಚಿತ.
ಅಂದಹಾಗೆ ಈ ಅಜ್ಜ ಹಿಂದೊಮ್ಮೆ ಯಕ್ಷಗಾನದ ಸ್ತ್ರೀ ವೇಷಧಾರಿಯೂ ಹೌದು. ಈಗ ಬದುಕಿನ ಬಂಡಿ ಸಾಗಿಸಲು ಮನೆಯಲ್ಲೇ ಹೊಟೇಲ್ ನಡೆಸುತ್ತಿದ್ದಾರೆ. ಇಲ್ಲಿ ಅಜ್ಜ ಅಜ್ಜಿಯೇ ಒಲೆಯಲ್ಲಿ ಅಡುಗೆ ಮಾಡಿ ಬಡಿಸುತ್ತಾರೆ. ಬೇರೆ ಕೆಲಸಗಾರರು ಯಾರೂ ಇಲ್ಲ. 50 ರೂ ಊಟದ ಜೊತೆಗೆ ಅಮೃತದಂತಹ ಮಜ್ಜಿಗೆ ಕೊಟ್ಟರೆ ಯಾರಿಗೆ ಬೇಡ ಹೇಳಿ ? ನೀವೊಮ್ಮೆ ಇಲ್ಲಿಗೆ ಭೇಟಿ ಕೊಡಿ.
-ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ
PublicNext
29/04/2022 08:36 pm