ವರದಿ: ರಹೀಂ ಉಜಿರೆ
ಕುಂದಾಪುರ: ಕರಾವಳಿಯ ಭತ್ತ ಬೆಳೆಗಾರರು ಜಿಲ್ಲಾಡಳಿತಕ್ಕೆ ನಾಲ್ಕು ದಿನಗಳ ಗಡುವು ನೀಡಿದ್ದಾರೆ. ರೈತರು ತಾವೇ ನಿಗದಿಪಡಿಸಿರುವ ದರದಲ್ಲಿ ಭತ್ತ ಖರೀದಿ ಮಾಡಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ. ರೈತ ಚಳುವಳಿಗಳಿಗೆ ಅಸ್ತಿತ್ವವೇ ಇಲ್ಲದ ಕರಾವಳಿ ಜಿಲ್ಲೆಯಲ್ಲಿ ಪಕ್ಷಭೇದ ಮರೆತು ಎಲ್ಲ ರೈತರು ಈ ಕಾರಣಕ್ಕೆ ಒಟ್ಟಾಗಿದ್ದಾರೆ.
ಈ ವರ್ಷ ಅಕಾಲಿಕ ಮಳೆಯಿಂದಾಗಿ ಭತ್ತ ಕೃಷಿಯ ಕೊಯ್ಲು ನಿರ್ವಹಣೆ ಬಹಳ ಕಷ್ಟವಾಗುತ್ತಿದೆ. ಇಳುವರಿಯಲ್ಲೂ ಸಾಕಷ್ಟು ಹಿನ್ನಡೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರೈತರು ತಾವೇ ಭತ್ತದ ದರ ನಿಗದಿ ಪಡಿಸಿದ್ದಾರೆ.ಪ್ರತಿ ಕ್ವಿಂಟಾಲಿಗೆ 2500 ರೂ. ನೀಡಲೇಬೇಕು ಎಂದು ನಿರ್ಧರಿಸಿದ್ದಾರೆ. ಸದ್ಯ ಕೆಜಿಗೆ ಕೇವಲ 16 -17 ರುಪಾಯಿ ದರ ಇದೆ. ಈ ಮೊತ್ತದಲ್ಲಿ ಏರಿಕೆ ಮಾಡಲೇಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ನಾಲ್ಕು ದಿನಗಳ ಗಡುವು ನೀಡಿದ್ದಾರೆ. ಸರಕಾರ ಸ್ಪಂದಿಸದೇ ಹೋದರೆ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ಉಡುಪಿ ಜಿಲ್ಲೆಯ ಭತ್ತದ ಮಿಲ್ಲುಗಳು ಆದ್ಯತೆಯ ಮೇರೆಗೆ ಇಲ್ಲಿನ ರೈತರಿಂದಲೇ ಭತ್ತವನ್ನು ಖರೀದಿಸಬೇಕು. ಅದಾದ ನಂತರವೇ ಹೊರಜಿಲ್ಲೆ ಅಥವಾ ರಾಜ್ಯಗಳ ಭತ್ತವನ್ನು ಖರೀದಿ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಸರಕಾರ ಕರಾವಳಿ ಜಿಲ್ಲೆಗಳ ಕೃಷಿ ಚಟುವಟಿಕೆಯನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈ ಜಿಲ್ಲೆಗಳಲ್ಲಿನ ಭಿನ್ನ ಭೌಗೋಳಿಕ ಅಂಶಗಳನ್ನು ಗಮನಿಸಿ, ಪ್ರತ್ಯೇಕ ಕೃಷಿ ನೀತಿಯನ್ನು ಜಾರಿಗೆ ತರಬೇಕು ಅನ್ನೋದು ರೈತರ ಒತ್ತಾಯ.
ಕೊರೋನಾ ಜಗತ್ತನ್ನು ಬದಲು ಮಾಡುತ್ತಿದೆ. ಕಠಿಣ ಪರಿಸ್ಥಿತಿಯನ್ನು ನೋಡಿದ ಜನ ಮರಳಿ ಮಣ್ಣಿಗೆ ಆಕರ್ಷಿತರಾಗಿದ್ದಾರೆ. ಮತ್ತೆ ಕೃಷಿಯತ್ತ ಮುಖ ಮಾಡಿರುವ ಜನರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದಾದರೂ ಕರಾವಳಿಯ ಭತ್ತದ ಬೆಳೆಗಾರರ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಪ್ರಕಟಿಸಬೇಕಿದೆ.
Kshetra Samachara
03/11/2021 02:46 pm