ಮುಲ್ಕಿ: ಕಟೀಲು ಸಮೀಪದ ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಒಳಪಟ್ಟ ದೈವಸ್ಥಾನದ ಭಂಡಾರ ಮನೆ ಎಕ್ಕಾರು ಕಾವರಮನೆಯ ಮುಂದಿನ ಗದ್ದೆಯಲ್ಲಿ ಪೂಕರೆ ಕಂಬಳ ನಡೆಯಿತು.
ಕ್ಷೇತ್ರದ ಭಂಡಾರಮನೆ ಕಾವರ ಮನೆ ಮುಂದೆ ಕಂಬಳದ ಗದ್ದೆಯೂ ಇದ್ದು, ಗ್ರಾಮದ ಪುರೋಹಿತ ವೇ.ಮೂ. ಹರಿದಾಸ ಉಡುಪರು ಸೂಚಿಸಿದ ದಿನದಂದು ಪೂಕರೆ ಕಂಬಳ ನಡೆಯುತ್ತದೆ.
ಪೂಕರೆಗೆ ಮೊದಲು ಕಂಬಳದ ಗದ್ದೆಯನ್ನು ಚೆನ್ನಾಗಿ ಉಳುಮೆ ಮಾಡಿ ಮಾಡಲಾಗುತ್ತದೆ. ಪೂಕರೆ ನಡೆಯುವ ದಿನ ಬೆಳಗ್ಗೆ ಗ್ರಾಮಕ್ಕೆ ಸಂಬಂಧಪಟ್ಟ ವಿಶ್ವಕರ್ಮರು ಕಾವರಮನೆಗೆ ಬಂದು, ಒಂದು ಅಡಿಕೆ ಮರವನ್ನು ಕಡಿದು ಅದರಿಂದ ಪೂಕರೆ ನಿರ್ಮಿಸುತ್ತಾರೆ.
ಪೂಕರೆಯ ತುದಿಗೆ ಹಲಸಿನ ಮರದಿಂದ ತಯಾರಿಸಿದ ಶಿಖರ ಇಟ್ಟು, ಕೇಪಳ ಹೂ, ಹಿಂಗಾರದಿಂದ ಶೃಂಗರಿಸಲಾಗುತ್ತದೆ. ನಾಲ್ಕು ಕಡೆಗಳ ಗುರಿಕಾರರು, ಕ್ಷೇತ್ರಕ್ಕೆ ಸಂಬಂಧಪಟ್ಟವರು ಮತ್ತು ಗ್ರಾಮಸ್ಥರು ಕಾವರಮನೆಗೆ ಆಗಮಿಸುತ್ತಾರೆ. ದೈವದ ಮುಂದೆ ಎಲ್ಲರೂ ನಿಂತು ಪ್ರಾರ್ಥನೆ ಮಾಡುತ್ತಾರೆ.
ನಂತರ ವಾದ್ಯ, ಬ್ಯಾಂಡ್, ಡೋಲು ವಾದನದೊಂದಿಗೆ ಎಲ್ಲ ಜಾತಿಯವರು ಸೇರಿ ಪೂಕರೆ ಹೆಗಲಲ್ಲಿ ಹೊತ್ತುಕೊಂಡು ಕಂಬಳದ ಗದ್ದೆ ಕಡೆ ಸಾಗುತ್ತಾರೆ. ಗದ್ದೆಯ ಮಧ್ಯ ಭಾಗಕ್ಕೆ ತೆಗೆದುಕೊಂಡು ಹೋಗಿ ಏಕಶಿಲಾ ದಂಬೆಕಲ್ಲಿಗೆ ಇಟ್ಟು ಪ್ರದಕ್ಷಿಣೆ ಹಾಕುತ್ತಾರೆ. ನಂತರ ಪೂಜೆ ಸಲ್ಲಿಸಿ ಪೂಕರೆಯನ್ನು ನೇರವಾಗಿ ದಂಬೆಕಲ್ಲಿನಲ್ಲಿ ನೆಡಲಾಗುತ್ತದೆ.
ನಂತರ ಅತಿಕಾರ ಬಿದೆಯ ನೇಜಿಯನ್ನು ಗದ್ದೆಗೆ ನೆಡಲಾಗುತ್ತದೆ. ನಂತರ ಎಲ್ಲರಿಗೂ ಭೋಜನ ನಡೆಯುತ್ತದೆ.
ಇದು ಒಂದು ಕೃಷಿ ಆರಾಧನೆಯಾಗಿದ್ದು, ಆಧುನಿಕ ಕಾಲದಲ್ಲಿ ಎಲ್ಲ ಕಟ್ಟುಕಟ್ಟಳೆ ನಡೆಸಲು ಸಾಧ್ಯವಿಲ್ಲದಿದ್ದರೂ ಮೂಲ ಆಚರಣೆಗೆ ಚ್ಯುತಿ ಬಾರದಂತೆ ಅತೀ ಪುರಾತನವಾದ ಈ ಅಚರಣೆ ನಡೆದುಕೊಂಡು ಬಂದಿದೆ. ಅಲ್ಲದೆ, ಕಂಬಳದಲ್ಲಿ ಬರುವ ಧಾರ್ಮಿಕ ಪ್ರಕ್ರಿಯೆ ಪಾಲಿಸಲಾಗುತ್ತದೆ.
ಈ ಬಗ್ಗೆ ಆಡಳಿತ ಮೊಕ್ತೇಸರ ಕಾವರಮನೆ ನಿತಿನ್ ಹೆಗ್ದೆ
ಮಾತನಾಡಿ, ಈ ಬಾರಿ ಕೊರೊನಾದಿಂದಾಗಿ ಕಾರ್ಯಕ್ರಮ ಸರಳವಾಗಿ ನಡೆದಿದ್ದು, ಲೋಕಕ್ಕೆ ಬಂದಿರುವ ಕೊರೊನಾ ಮಹಾಮಾರಿ ದೂರವಾಗಿ ಆರೋಗ್ಯ, ಶಾಂತಿ ನೆಲೆಸಲಿ ಎಂದರು.
Kshetra Samachara
12/12/2020 10:57 am