ಉಳ್ಳಾಲ : ವಿಹಾರಕ್ಕೆಂದು ಕುಟುಂಬದೊಂದಿಗೆ ಉಳ್ಳಾಲದ ಸಮ್ಮರ್ ಸ್ಯಾಂಡ್ಸ್ ಬೀಚ್ ರೆಸಾರ್ಟ್ ಗೆ ಬಂದಿದ್ದ ಮೈಸೂರು ಮೂಲದ ಮಹಿಳೆಯೊಬ್ಬರು ಸಮುದ್ರ ಪಾಲಾದ ಘಟನೆ ಶನಿವಾರ ಉಳ್ಳಾಲದಲ್ಲಿ ನಡೆದಿದೆ. ಮೃತರನ್ನು ಮೈಸೂರು ನಿವಾಸಿ ಭಾಗ್ಯಲಕ್ಷ್ಮಿ(46) ಎಂದು ಗುರುತಿಸಲಾಗಿದೆ. ಭಾಗ್ಯಲಕ್ಷ್ಮಿ ಅವರು ಪತಿ, ಮೂವರು ಪುತ್ರಿಯರು ಹಾಗೂ ಮೊಮ್ಮಗಳೊಂದಿಗೆ ಮೈಸೂರಿನಿಂದ ಮಂಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದರು.
ಪಂಪ್ ವೆಲ್ ಬಳಿಯ ಲಾಡ್ಜ್ ನಲ್ಲಿ ತಂಗಿದ್ದ ಕುಟುಂಬ ಶನಿವಾರ ಬೆಳಗ್ಗೆ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಉಳ್ಳಾಲ ಸಮ್ಮರ್ ಸ್ಯಾಂಡ್ಸ್ ಬೀಚ್ ರೆಸಾರ್ಟ್ ಗೆ ವಿಹಾರಕ್ಕೆಂದು ತೆರಳಿದ್ದರು.
ಈ ವೇಳೆ ಭಾಗ್ಯಲಕ್ಷ್ಮಿ ಅವರ ಪತಿ ಮತ್ತು ಮಗು ಭಾರೀ ಅಲೆಗಳ ನಡುವೆ ಸಿಲುಕಿದ್ದು,ಅವರನ್ನ ರಕ್ಷಿಸಲು ಭಾಗ್ಯಲಕ್ಷ್ಮಿ ಅವರು ಸಮುದ್ರಕ್ಕಿಳಿದಿದ್ದಾರೆ.ದುರದೃಷ್ಟ ಭಾಗ್ಯಲಕ್ಷ್ಮಿ ಅವರೇ ಅಲೆಗೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ. ಅವರೊಂದಿಗೆ ಬಂದಿದ್ದ ಪತಿ, ಮಕ್ಕಳು ಕೂಡಲೇ ಕಿರುಚಲು ಆರಂಭಿಸಿದಾಗ ಸಮೀಪದಲ್ಲೇ ಇದ್ದ ಮೀನುಗಾರರು ಮಹಿಳೆಯನ್ನು ಮೇಲಕ್ಕೆತ್ತಿ ಆಸ್ಪತ್ರೆ ಕೊಂಡೊಯ್ಯುವ ದಾರಿಯಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
29/05/2022 10:52 am