ಗಂಗೊಳ್ಳಿ :ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟೊಂದು ಅಲೆಗಳ ಅಬ್ಬರಕ್ಕೆ ಮುಳುಗಡೆಗೊಂಡಿದ್ದು, ಐವರು ಮೀನುಗಾರರನ್ನು ರಕ್ಷಿಸಲಾಗಿದೆ.
ಉದ್ಯಾವರ ಸಂಪಿಗೆನಗರದ ಮುಹಮ್ಮದ್ ಹನೀಫ್ ಎಂಬವರ ‘ಮನಾಲ್’ ಹೆಸರಿನ ಬೋಟು ಮಾ.29ರಂದು ಮಧ್ಯಾಹ್ನ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮಾ.30ರಂದು ಮಧ್ಯರಾತ್ರಿ ಗಂಗೊಳ್ಳಿ ಯಿಂದ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸಮುದ್ರದ ಅಲೆಗಳ ಒತ್ತಡಕ್ಕೆ ಇಂಜಿನ್ ಕೆಳಭಾಗದ ಪೈಬಲ್ ಶೀಟ್ ಒಡೆಯಿತ್ತೆನ್ನಲಾಗಿದೆ.
ಇದರಿಂದ ನೀರು ಬೋಟಿನೊಳಗೆ ನುಗ್ಗಲು ಪ್ರಾರಂಭವಾಯಿತು. ಕೂಡಲೇ ಹತ್ತಿರದಲ್ಲಿದ್ದ ರಾಜರಕ್ಷಾ ಬೋಟಿನವರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ‘ರಾಜರಕ್ಷಾ’ ಬೋಟಿನವರು ಮುಳುಗಡೆಯಾಗುತ್ತಿದ್ದ ಬೋಟಿನಲ್ಲಿದ್ದ ತಾಂಡೇಲಾ ನಾಗಪ್ಪ ರಾಮ ಅಂಬಿಗ, ಕಲಾಸಿಯವರಾದ ಸಚಿನ್ ಉಲ್ಲಾಸ, ದೀಪಕ್ ಖಾರ್ವಿ, ಸುಭಾಷ್ ಗಾಂಗೇಶ್ವರ, ಸೂರಜ್ ಕುಮಾರ್ ಭಗತ್ ಅವರನ್ನು ರಕ್ಷಿಸಲಾಗಿದೆ. ಬೋಟು ಮುಳುಗಡೆಯಾಗಿರುವುದರಿಂದ ಸುಮಾರು 45ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
01/04/2022 08:57 pm