ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಿ.ಸಿ.ರೋಡ್ ಅಡ್ಡಹೊಳೆ ವರೆಗೆ ನಡೆಯುತ್ತಿದ್ದು, ಈ ಸಂದರ್ಭ ಕಲ್ಲಡ್ಕದಲ್ಲಿ ಭರದಿಂದ ನಡೆಯುತ್ತಿರುವ ಕೆಲಸದ ವೇಳೆ ರಸ್ತೆ ಬದಿ ಇರುವ ಆರೆಸ್ಸೆಸ್ ಹಿರಿಯ ಧುರೀಣ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ಮನೆಯ ಕಂಪೌಂಡ್ ಗೋಡೆ ಕುಸಿದುಬಿದ್ದಿದೆ.
ಗುರುವಾರ ರಾತ್ರಿ ಈ ಘಟನೆ ಸಂಭವಿಸಿದೆ. ಈಗಾಗಲೇ ಕಲ್ಲಡ್ಕದಲ್ಲಿ ರಸ್ತೆ ಅಗಲಗೊಳ್ಳುವ ವೇಳೆ ಎಷ್ಟು ಮೀಟರ್ ಅಗಲಗೊಳ್ಳುತ್ತದೆ ಇತ್ಯಾದಿ ಮಾಹಿತಿ ಕೊರತೆ ಜನರಲ್ಲಿದ್ದು, ಇದೇ ವೇಳೆ ಕಾಮಗಾರಿ ವೇಗವಾಗಿ ನಡೆಯುತ್ತಿದೆಯೇ ಎಂಬುದನ್ನು ವೀಕ್ಷಿಸಲು ಸಂಸದ ನಳಿನ್, ಶಾಸಕ ರಾಜೇಶ್ ನಾಯ್ಕ್ ಮತ್ತು ಸಚಿವ ಅಂಗಾರ ಇತ್ತೀಚೆಗಷ್ಟೇ ಕಲ್ಲಡ್ಕಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಾಮಗಾರಿ ನಡೆಸುತ್ತಿರುವ ಕಂಪನಿ ಕುರಿತು ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ರಸ್ತೆ ಅಗಲೀಕರಣ ಜೊತೆ ಸರಾಗವಾಗಿ ಮಳೆನೀರು ಹರಿದು ಹೋಗುವ ಉದ್ದೇಶದಿಂದ ಅಲ್ಲಲ್ಲಿ ಸಿಮೆಂಟ್ ಪೈಪ್ ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಕಲ್ಲಡ್ಕ ಮುಖ್ಯಪೇಟೆಯಲ್ಲಿರುವ ಡಾ.ಭಟ್ ಅವರ ಮನೆ ಮುಂಭಾಗ ಕೂಡ ಸಿಮೆಂಟ್ ಪೈಪ್ ಅಳವಡಿಕೆಗಾಗಿ ಕಂಪೌಂಡ್ ಸುತ್ತ ಅಗೆಯಲಾಗಿತ್ತು. ಕಂಪೌಂಡ್ ಬದಿಯಲ್ಲಿ ಮತ್ತು ಅಡಿಪಾಯ ವರೆಗೆ ಅಗೆದ ಪರಿಣಾಮ ಜೊತೆಗೆ ಸಡಿಲ ಮಣ್ಣಿನ ಕಾರಣದಿಂದ ಕಂಪೌಂಡ್ ಗೋಡೆಯೇ ಜರಿದು ಬಿದ್ದಿದೆ.
Kshetra Samachara
28/01/2022 03:54 pm