ಬಜಪೆ :ಚಿಪ್ಪು (ಮರುವಾಯಿ) ಮೀನಿನ ಪದಾರ್ಥ ಸೇವಿಸಿ ಹಲವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕುಪ್ಪೆಪದವು ಸಮೀಪದ ಕುಲವೂರು ಮತ್ತು ಮುತ್ತೂರು ಪರಿಸರದಲ್ಲಿ ನಡೆದಿದೆ.ಚಿಪ್ಪು ಮೀನಿನ ಪದಾರ್ಥ ಮಾಡಿ ಸೇವಿಸಿದ ಹಲವರಿಗೆ ತಲೆಸುತ್ತು ಬಂದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಸ್ಥಳೀಯ ಮೀನು ಮಾರಾಟಗಾರರಿಂದ ಖರೀದಿಸಿದ್ದ ಚಿಪ್ಪು ಮೀನು ತಿಂದ ಹೆಚ್ಚಿನವರು ಅಸ್ವಸ್ಥಗೊಂಡಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಓರ್ವರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಶನಿವಾರ ಬೆಳಿಗ್ಗೆ ಖರೀದಿಸಿ ತಂದು ಮಧ್ಯಾಹ್ನ ಪದಾರ್ಥ ಮಾಡಿ ಊಟ ಮಾಡಿದೆವು ಮನೆಯಲ್ಲಿದ್ದ ನಾವು ಮೂವರಿಗೂ ಪದಾರ್ಥ ತಿಂದ ಕೆಲವೇ ನಿಮಿಷಗಳಲ್ಲಿ ವಿಪರೀತ ತಲೆ ಸುತ್ತು ಕಾಣಿಸಿಕೊಂಡು ಕಣ್ಣುಗಳು ಮಂಜಾಗಲಾರಂಭಿಸಿದವು ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡೆವು ಎಂದು ಕುಲವೂರಿನ ರಜನಿ ಹೇಳಿದ್ದಾರೆ.
ಚಿಪ್ಪು ಮೀನು ಪದಾರ್ಥ ಸೇವಿಸಿ ಅಸ್ವಸ್ಥ ಗೊಂಡ ಕೆಲವರು ಚಿಕಿತ್ಸೆ ಪಡೆದುಕೊಂಡಿರುವುದನ್ನು ಖಾಸಗಿ ಆಸ್ಪತ್ರೆಯ ಮೂಲಗಳು ದೃಢ ಪಡಿಸಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾರೂ ಚಿಕಿತ್ಸೆ ಪಡೆದುಕೊಂಡಿಲ್ಲ ಎಂದು ಆರೋಗ್ಯಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಚಿಪ್ಪು ಮೀನಿನ ಪದಾರ್ಥ ಸೇವನೆಯಿಂದ ಅಸ್ವಸ್ಥಗೊಳ್ಳಲು ನಿರ್ದಿಷ್ಟ ಕಾರಣ ಏನು ಎಂದು ಸ್ಪಷ್ಟವಾಗಿಲ್ಲವಾದರೂ ಮೀನು ಕೆಡದಂತೆ ಸಂರಕ್ಷಿಸಲು ಬಳಸುವ ರಾಸಾಯನಿಕದಿಂದಾಗಿ ಅಸ್ವಸ್ಥತೆ ಕಂಡು ಬಂದಿರಬಹುದೆಂದು ಅಸ್ವಸ್ಥಗೊಂಡಿದ್ದ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
Kshetra Samachara
19/01/2022 10:24 am