ಮುಲ್ಕಿ: ಕಿನ್ನಿಗೋಳಿ ಸಮೀಪದ ಮೂರುಕಾವೇರಿ ರಾಜ್ಯ ಹೆದ್ದಾರಿ ಬಳಿಯ ಬಹುಮಹಡಿ ಕಟ್ಟಡವೊಂದರಲ್ಲಿ ಗೂಡು ಕಟ್ಟಿದ್ದ ಜೇನು ನೊಣಗಳ ಗುಂಪು ಹೆದ್ದಾರಿಯಲ್ಲಿ ನಡೆದುಕೊಂಡು ಹಾಗೂ ಬೈಕಿನಲ್ಲಿ ಹೋಗುತ್ತಿದ್ದವರಿಗೆ ಕಚ್ಚಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಾಳುಗಳನ್ನು ಕಿನ್ನಿಗೋಳಿ ಚರ್ಚ್ ಬಳಿಯ ನಿವಾಸಿ ಅಲ್ಫ್ರೆಡ್ ಸೈಮನ್ ಡಿಸೋಜಾ (65), ಕಿನ್ನಿಗೋಳಿ ಗೋಳಿಜೋರ ನಿವಾಸಿ ರವಿ (44), ಮುಂಡ್ಕೂರು ಜಾರಿಗೆ ಕಟ್ಟೆ ನಿವಾಸಿ ರಾಮಚಂದ್ರ ಕಾಮತ್ (52), ಮೂರುಕಾವೇರಿ ನಿವಾಸಿ ಸೂರ್ಯಕಾಂತ ನಾರಾಯಣ ನಾಯಕ (57), ಶರತ್ ಪೂಜಾರಿ ಮಾರಡ್ಕ(31), ಮೂರುಕಾವೇರಿ ರಾಜ್ ಹೆರಿಟೇಜ್ ನಿವಾಸಿಗಳಾದ ರಿಚಾರ್ಡ್(50), ರೆವಿಯಾನ್ (14), ಮುಚ್ಚೂರು ನಿವಾಸಿ ಮನೋಹರ (34) ಎಂದು ಗುರುತಿಸಲಾಗಿದೆ.
ಗಾಯಾಳುಗಳು ಕಿನ್ನಿಗೋಳಿ ಮೂರುಕಾವೇರಿ ರಾಜ್ಯ ಹೆದ್ದಾರಿಯಲ್ಲಿ ಬೈಕ್ ಹಾಗೂ ನಡೆದುಕೊಂಡು ಹೋಗುತ್ತಿದ್ದಾಗ ಹೆದ್ದಾರಿ ಬದಿಯ ರಾಜ್ ಹೆರಿಟೇಜ್ ಎಂಬ ಬಹುಮಹಡಿ ಕಟ್ಟಡದಲ್ಲಿ ಗೂಡು ಕಟ್ಟಿದ ಜೇನುನೊಣಗಳು ಏಕಾಏಕಿ ಕಚ್ಚಿದೆ ಎನ್ನಲಾಗಿದೆ.
ಕೂಡಲೇ ಗಾಯಾಳುಗಳನ್ನು ಕಿನ್ನಿಗೋಳಿಯ ಕಾನ್ಸೆಟ್ಟಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗಿದೆ.
ಕಳೆದ ಹಲವಾರು ವರ್ಷಗಳಿಂದ ಈ ಬಹುಮಹಡಿ ಕಟ್ಟಡದ ವಸತಿ ಸಂಕೀರ್ಣದಲ್ಲಿ ಜೇನು ನೊಣ ಗೂಡು ಕಟ್ಟಿದ್ದು ಅಪಾಯವನ್ನು ಆಹ್ವಾನಿಸುತ್ತಿದ್ದು ಕೂಡಲೇ ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
20/12/2021 12:02 pm