ಸುಳ್ಯ: ಗ್ಯಾರೇಜ್ ನಲ್ಲಿ ಕಾರು ದುರಸ್ತಿ ಮಾಡುವ ಸಂದರ್ಭ ಆಕಸ್ಮಿಕ ಬೆಂಕಿ ತಗುಲಿ ಕಾರು ಹೊತ್ತಿ ಉರಿದ ಘಟನೆ ನಿನ್ನೆ (ಮಂಗಳವಾರ) ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಸಂಭವಿಸಿದೆ.
ಬೆಳ್ಳಾರೆಯ ನಾರಾಯಣ ಮೇಸ್ತ್ರಿಯವರ ಗ್ಯಾರೇಜ್ ನಲ್ಲಿ ಸುಳ್ಯ ಪೊಲೀಸ್ ಅಧಿಕಾರಿ ಸತೀಶ್ ಅವರು ತನ್ನ ಆಲ್ಟೋ ಕಾರನ್ನು ಬಾಡಿವರ್ಕ್ಸ್ ಗಾಗಿ ಇಟ್ಟು ಹೋಗಿದ್ದರು. ಗ್ಯಾರೇಜ್ ನಲ್ಲಿ ನಾರಾಯಣ, ಕಾರಿನ ಅಡಿಭಾಗದಲ್ಲಿ ಗ್ಯಾಸ್ ವೆಲ್ಡಿಂಗ್ ಮಾಡುತ್ತಿದ್ದರು. ಆದರೆ, ಕಾರಿನ ಒಳಭಾಗದ ಮ್ಯಾಟ್ ಗೆ ಬೆಂಕಿ ತಗುಲಿ ಹೊತ್ತಿ ಉರಿಯ ತೊಡಗಿತು.
ಬೆಂಕಿ ತಗುಲಿದ್ದು ನಾರಾಯಣ ಅವರ ಗಮನಕ್ಕೆ ತಡವಾಗಿ ಬಂದು ಅವರು ಬೊಬ್ಬಿಡಲಾರಂಭಿಸಿದಾಗ ಆಸುಪಾಸಿನಲ್ಲಿದ್ದ ರಿಕ್ಷಾ ಚಾಲರು ಮತ್ತು ಸ್ಥಳೀಯರು ಉರಿಯುತ್ತಿದ್ದ ಕಾರನ್ನು ತಳ್ಳುತ್ತಾ ಗ್ಯಾರೇಜ್ ನಿಂದ ಹೊರತಂದು, ರಸ್ತೆಯಲ್ಲಿ ನಿಲ್ಲಿಸಿ ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಸಫಲರಾದರು.
ಒಂದು ವೇಳೆ ಕಾರು ಗ್ಯಾರೇಜ್ ನಲ್ಲೇ ಉಳಿಯುತ್ತಿದ್ದರೆ ಉಳಿದ ವಾಹನಗಳಿಗೂ ಬೆಂಕಿ ತಗಲುವ ಅಪಾಯವಿತ್ತು ಮತ್ತು ವೆಲ್ಡಿಂಗ್ ಗ್ಯಾಸ್ ಸಿಲಿಂಡರ್ ಸ್ಫೋಟದ ಸಾಧ್ಯತೆಯಿತ್ತು! ಆದರೆ, ಸ್ಥಳೀಯ ರಿಕ್ಷಾಚಾಲಕರ, ಪರಿಸರದ ಜನರ ಸಮಯಪ್ರಜ್ಞೆಯಿಂದ ಸಂಭವನೀಯ ಭಾರಿ ದುರಂತವೊಂದು ತಪ್ಪಿದೆ. ಕಾರು ಬಹುಪಾಲು ಸುಟ್ಟು ಹೋಗಿದೆ.
Kshetra Samachara
08/12/2021 08:43 am