ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಹೇಬ್ರಕಟ್ಟೆ: ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಕೋಟ: ಕಾರು ಹಾಗೂ ಮೀನು ಸಾಗಾಟದ ಮಿನಿ ಪಿಕಪ್, ಬೈಕ್ ನಡುವೆ ಸರಣಿ ಅಪಘಾತ ನಡೆದು ಮಿನಿ ಪಿಕಪ್ ಚಾಲಕ ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬ್ರಹ್ಮಾವರ ತಾಲೂಕಿನ ಸಾಹೇಬ್ರಕಟ್ಟೆ ಹೈಸ್ಕೂಲ್ ಸಮೀಪ ಮಲಸವಾರಿ ದೇವಸ್ಥಾನದ ತಿರುವಿನಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಮಿನಿ ಪಿಕಪ್ ಚಾಲಕ ಮಧುವನ ಅಚ್ಲಾಡಿ ನಿವಾಸಿ ಸುರೇಶ್ ಮರಕಾಲ (40) ಮೃತ ದುರ್ದೈವಿ ಹಾಗೂ ಸಹಸವಾರ ರಾಜು ಮರಕಾಲ (60) ಬೈಕ್ ಸವಾರ ಶಿರಿಯಾರ ನಿವಾಸಿ ಸುಬ್ರಹ್ಮಣ್ಯ ಕುಲಾಲ್ (42) ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುರೇಶ್ ಹಾಗೂ ರಾಜು ಮರಕಾಲ ಪ್ರತಿದಿನ ಮಲ್ಪೆಯಲ್ಲಿ ಮೀನು ಖರೀದಿಸಿ ಪಿಕಪ್ ನಲ್ಲಿ ತಂದು ಮಾರಾಟ ಮಾಡುತ್ತಿದ್ದರು. ಎಂದಿನಂತೆ ಇಂದೂ ಕೂಡ ಮಲ್ಪೆಯಲ್ಲಿ ಮೀನು ಖರೀದಿಸಿ ಸಾಹೇಬ್ರಕಟ್ಟಗೆ ವಾಪಸಾಗುವಾಗ ಮಲಸವಾರಿ ದೇವಸ್ಥಾನದ ತಿರುವಿನಲ್ಲಿ ಬ್ರಹ್ಮಾವರ ಕಡೆ ಸಂಚರಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಅತೀ ವೇಗವಾಗಿ, ವಿರುದ್ಧ ದಿಕ್ಕಿಗೆ ಬಂದು ಬೈಕು ಹಾಗೂ ಮಿನಿ ಪಿಕಪ್ ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ತೀವೃತೆಗೆ ಸುರೇಶ್ ಹಾಗೂ ರಾಜು ಮರಕಾಲ ಪಿಕಪ್ ಒಳಗಡೆ ಸಿಲುಕಿ ಹಾಕಿಕೊಂಡಿದ್ದರು. ಅವರನ್ನು‌ ಹೊರತೆಗೆಯಲು ಸ್ಥಳೀಯರು ಹರಸಾಹಸ ಪಟ್ಟರು. ಅನಂತರ ಜೀವನ್ ಮಿತ್ರ, 108 ಹಾಗೂ ಸಾಹೇಬ್ರಕಟ್ಟೆಯ ಜನನಿ ಅಂಬ್ಯಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಮರಕಾಲ ಆಸ್ಪತ್ರೆಗೆ ದಾಖಲಿಸುವಾಗಲೇ ಮೃತ ಪಟ್ಟಿದ್ದರು.

ಅಪಾಯಕಾರಿ ತಿರುವು; ಅಪಘಾತ ನಡೆದ ತಿರುವು ಅತ್ಯಂತ ಅಪಾಯಕಾರಿ ಹಾಗೂ ಇಕ್ಕಟ್ಟಿನಿಂದ ಕೂಡಿದ್ದು ಈ ಮೊದಲೇ ಹಲವು ಅಪಘಾತಗಳು ನಡೆದಿದೆ.

ಬ್ರಹ್ಮಾವರ ಪೋಲಿಸರು ಸ್ಥಳಕ್ಕಾಗಮಿಸಿ ತನಿಖೆ ಕೈಗೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Shivu K
Kshetra Samachara

Kshetra Samachara

05/12/2021 03:19 pm

Cinque Terre

16.24 K

Cinque Terre

1