ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೊಲ್ನಾಡು ಹೆದ್ದಾರಿಯಲ್ಲಿ ಹೊತ್ತಿ ಉರಿದು ಕಾರು ಭಸ್ಮ!; ಚಾಲಕ ಪವಾಡಸದೃಶ ಪಾರು

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೊಲ್ನಾಡು ಎಂಬಲ್ಲಿ ಚಲಿಸುತ್ತಿದ್ದ ಕಾರಿಗೆ(k28 ಎನ್ 91 96) ಆಕಸ್ಮಿಕ ಬೆಂಕಿ ತಗುಲಿದ್ದು ಚಾಲಕ ಪವಾಡಸದೃಶ ಪಾರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಡುಪಣಂಬೂರು ಪೆಟ್ರೋಲ್ ಬಂಕ್ ನಿಂದ ಡೀಸೆಲ್ ಹಾಕಿಸಿಕೊಂಡು ಫಿಯೆಟ್ ಫುಂಟೋ ಕಾರು ಚಾಲಕ ಕೊಲ್ನಾಡು ಹೆದ್ದಾರಿ ತಲುಪುತ್ತಿದ್ದಂತೆಯೇ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಧಗಧಗನೆ ಉರಿಯಲಾರಂಭಿಸಿದೆ. ಈ ಸಂದರ್ಭ ಕಾರಿನ ಚಾಲಕ ಕಾರ್ನಾಡು ನಿವಾಸಿ ಮಹಮ್ಮದ್ ಫಯಾಝ್ ಕಾರಿನಿಂದ ಹೊರಕ್ಕೆ ಹಾರಿ ಪಾರಾಗಿದ್ದಾರೆ.

ಈ ಘಟನೆಯಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತ ಗೊಂಡಿದ್ದು, ಕೂಡಲೇ ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ನಿಯಂತ್ರಿಸಿ ಏಕಮುಖ ರಸ್ತೆಯಲ್ಲಿಯೇ ವಾಹನ ಸಂಚರಿಸುವಂತೆ ಮಾಡಿದರು. ಸ್ಥಳಕ್ಕೆ ದೌಡಾಯಿಸಿದ ಹಳೆಯಂಗಡಿಯ ಪೂಜಾ ರೇಂಜರ್ಸ್ ವಾಟರ್ ಸಪ್ಲೈ ಮೂಲಕ ಕಾರಿಗೆ ಹೊತ್ತಿದ್ದ ಬೆಂಕಿ ನಂದಿಸಲಾಯಿತು. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸಿದ್ದಾರೆ.

ಮುಲ್ಕಿ ಪರಿಸರದಲ್ಲಿ ಯಾವುದೇ ಅವಘಡ ಸಂಭವಿಸಿದರೂ ಅಗ್ನಿಶಾಮಕ ವಾಹನವಿಲ್ಲದೆ ನಾಗರಿಕರು ತೊಂದರೆ ಅನುಭವಿಸುತ್ತಿದ್ದು, ಶೀಘ್ರ ಮುಲ್ಕಿಯಲ್ಲಿ ಅಗ್ನಿಶಾಮಕ ದಳ ಘಟಕ ಸ್ಥಾಪಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

08/02/2021 08:14 pm

Cinque Terre

31.48 K

Cinque Terre

0