ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ವಿಜಯ ಸನ್ನಿಧಿ ಬಳಿ ಬಸ್ ಕಾರಿಗೆ ಡಿಕ್ಕಿಯಾಗಿ ಹೆದ್ದಾರಿ ಸಂಚಾರ ಕೆಲಹೊತ್ತು ಅಸ್ತವ್ಯಸ್ತಗೊಂಡಿತು.
ಮಣಿಪಾಲದಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಬಿಎಂಡಬ್ಲ್ಯೂ ಕಾರಿಗೆ ಕಾರ್ನಾಡು ಒಳ ರಸ್ತೆಯಿಂದ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಸರ್ವಿಸ್ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಎದುರು ಭಾಗ
ಹಾನಿಯಾಗಿದ್ದು, ಕಾರಿನಲ್ಲಿದ್ದ ಇಬ್ಬರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾರಿನಲ್ಲಿದ್ದವರು ಮಂಗಳೂರಿನ ಪಳ್ನೀರ್ ನಿವಾಸಿಗಳು ಎಂದು ತಿಳಿದುಬಂದಿದೆ. ಅಪಘಾತದಿಂದಾಗಿ ಕೆಲಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸ್ಥಳಕ್ಕೆ ಸುರತ್ಕಲ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಕ್ರೇನ್ ಮೂಲಕ ಕಾರನ್ನು ತೆರವುಗೊಳಿಸಲಾಯಿತು. ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿಯಲ್ಲಿ ಚತುಷ್ಪಥ ಸರ್ವಿಸ್ ರಸ್ತೆ ಕಾಮಗಾರಿ ಕೆಲವರ್ಷಗಳಿಂದ ಅರ್ಧಂಬರ್ಧ ವಾಗಿದ್ದು, ಮುಲ್ಕಿ ವಿಜಯ ಸನ್ನಿಧಿ, ಬಸ್ ನಿಲ್ದಾಣ ಬಳಿ, ಬಪ್ಪನಾಡು ದೇವಳದ ದ್ವಾರದ ಬಳಿಯಲ್ಲಿ ಅನೇಕ ಅಪಘಾತಗಳು ಈ ಮೊದಲು ನಡೆದಿದ್ದು ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ.
ಶೀಘ್ರ ಸರ್ವಿಸ್ ರಸ್ತೆ ಕಾಮಗಾರಿ ನಡೆಸುವಂತೆ ಸ್ಥಳೀಯ ರಿಕ್ಷಾ ಚಾಲಕ ಮೋಹನ್ ಕುಬೆವೂರು ಹೆದ್ದಾರಿ ಇಲಾಖೆಯನ್ನು ಒತ್ತಾಯಿಸಿದ್ದಾರೆ.
Kshetra Samachara
16/01/2021 04:44 pm