ಕಾರು ಚಾಲಕನೋರ್ವ ಟ್ರಾನ್ಸ್‌ಫಾರ್ಮರ್ ಅಳವಡಿಸುತ್ತಿದ್ದ ಮೆಸ್ಕಾಂ ಸಿಬ್ಬಂದಿಗೆ ಗುದ್ದಿದ ಘಟನೆ ಶಿರ್ವ ಕಟಪಾಡಿ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.
ಶಿರ್ವ ನ್ಯಾರ್ಮ ಎಂಬಲ್ಲಿ ಟ್ರಾನ್ಸ್‌ಫಾರ್ಮರ್ ಕೆಲಸ ಪ್ರಗತಿಯಲ್ಲಿತ್ತು. 12 ಮಂದಿ ಮೆಸ್ಕಾಂ ಸಿಬ್ಬಂದಿ ಕೆಲಸ ಮಾಡುತ್ತಿದ್ದಾಗ ಕೆಲಕಾಲ ರಸ್ತೆ ತಡೆ ಒಡ್ಡಿದ್ದರು. ಈ ವೇಳೆ ಕಟಪಾಡಿಯಿಂದ ಶಿರ್ವ ಕಡೆಗೆ ಸಾಗುತ್ತಿದ್ದ ರಿಟ್ಜ್ ಕಾರಿನ ಚಾಲಕ ನೇರವಾಗಿ ಮುನ್ನುಗ್ಗಿ ಬಂದು ಮೆಸ್ಕಾಂ ಸಿಬ್ಬಂದಿಗೆ ಗುದ್ದಿದ್ದಾನೆ. ಇದರಿಂದ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಇದೇ ಸಂದರ್ಭ ವಿದ್ಯುತ್ ಕಂಬ ಕಾರಿನ ಮೇಲೆ ಬಿದ್ದು ಕಾರು ಜಖಂ ಗೊಂಡಿದೆ. ಗಾಯಕೊಂಡ ಸಿಬ್ಬಂದಿಯನ್ನು ಶಿರ್ವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ಈ ಘಟನೆಯಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರಕ್ಕೆ ತಡೆ ಉಂಟಾಗಿ, ಶಾಲಾ ಮಕ್ಕಳು ಹಾಗೂ ಕೆಲಸಕ್ಕೆ ಸಾಗುವವರಿಗೆ ಸಂಕಷ್ಟ ಉಂಟಾಯಿತು. ತಕ್ಷಣವೇ ಶಿವ ಪೊಲೀಸರು ಹಾಗೂ ಸ್ಥಳೀಯರು ರಸ್ತೆ ಸಂಚಾರ ಸುಗಮಗೊಳಿಸಿದ್ದಾರೆ.
Kshetra Samachara
13/09/2022 02:55 pm