ಮುಲ್ಕಿ : ಹಳೆಯಂಗಡಿ ಗ್ರಾಪಂ ವ್ಯಾಪ್ತಿಯ ಇಂದಿರಾನಗರ ಬಳಿಯ ಕೆಲವು ಮನೆಗಳಲ್ಲಿ ಗುರುವಾರ ಸಂಜೆ ಏಕಾಏಕಿ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸಿ, ಅನೇಕ ಎಲೆಕ್ಟ್ರಾನಿಕ್ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಹಾಗೂ ಈ ಬಗ್ಗೆ ಹಳೆಯಂಗಡಿ ಮೆಸ್ಕಾಂ ಇಲಾಖೆಗೆ ತಿಳಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಆರೋಪಿಸಿದ್ದಾರೆ.
ಇಂದಿರಾನಗರದ ಸುಮಾರು 10-15 ಮನೆಗಳಲ್ಲಿ ಏಕಾಏಕಿ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸಿದೆ. ಸ್ಥಳೀಯರಾದ ಮುಬಾರಕ್ ಅವರ ಮನೆಯ ಟಿವಿ, ಮಿಕ್ಸಿ ಮತ್ತಿತರ ಎಲೆಕ್ಟ್ರಾನಿಕ್ ವಸ್ತು ಕೆಟ್ಟು ಹೋಗಿದ್ದರೆ, ಕೆಲವು ಮನೆಯ ಟ್ಯೂಬ್ ಲೈಟ್, ಬಲ್ಬು ನಾಶವಾಗಿದೆ.
ಹಾಗೆಯೇ ಹಾರಿಸ್ ಎಂಬವರ ಮನೆಯಲ್ಲಿ ಸಮಾರಂಭ ನಡೆಯುತ್ತಿದ್ದು ಏಕಾಏಕಿ ಬಂದ ಅಧಿಕ ವಿದ್ಯುತ್ ಪ್ರವಾಹದಿಂದ ಅಡುಗೆ ಕೋಣೆಯಲ್ಲಿದ್ದ ಮಹಿಳೆಯರಿಗೆ ವಿದ್ಯುತ್ ಶಾಕ್ ಹೊಡೆದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಕೂಡಲೇ ಸ್ಥಳೀಯರು ಹಳೆಯಂಗಡಿ ಮೆಸ್ಕಾಂ ಗೆ ದೂರು ನೀಡಿದರೂ ಮೆಸ್ಕಾಂ ಕಚೇರಿಯಲ್ಲಿ ದೂರವಾಣಿ ತೆಗೆಯದ ಕಾರಣ ಆಕ್ರೋಶಗೊಂಡ ನಾಗರಿಕರು ಮೆಸ್ಕಾಂ ಕಚೇರಿಗೆ ಧಾವಿಸಿ ದೂರು ನೀಡಲು ಹೋದಾಗ ಅಲ್ಲಿ ಯಾರೂ ಇರಲಿಲ್ಲ ಎಂದು ಅದ್ದಿ ಬೊಳ್ಳೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳಿಕ ಸ್ಥಳೀಯ ಮೆಸ್ಕಾಂ ಸಿಬ್ಬಂದಿ ಜಗದೀಶ್ ಗೆ ಕರೆ ಮಾಡಿ ವಿದ್ಯುತ್ ಲೈನ್ ನ್ನು ಮುಂಜಾಗರೂಕತೆ ಕ್ರಮವಾಗಿ ಆಫ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ನಡುವೆ ಅದ್ದಿ ಬೊಳ್ಳೂರು ಎಲ್ಲರಿಗೂ ಸಾಮಾಜಿಕ ಜಾಲತಾಣ ಮುಖಾಂತರ ಅಧಿಕ ವಿದ್ಯುತ್ ಪ್ರವಹಿಸಿದ ಬಗ್ಗೆ ಎಚ್ಚರಿಕೆಯಲ್ಲಿ ಇರುವಂತೆ ಗ್ರಾಹಕರಿಗೆ ತಿಳಿಸಿ ಜಾಗೃತಿ ಮೂಡಿಸಿದ್ದಾರೆ.
Kshetra Samachara
15/10/2020 10:48 pm