ಉಡುಪಿ: ರಾಜ್ಯ ಸರಕಾರದ ಆದೇಶದಂತೆ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಾದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಬ್ಯಾನರ್, ಬಂಟಿಂಗ್ಸ್, ಪ್ಲೆಕ್ಸ್, ಪ್ಲೇಟ್, ಧ್ವಜ, ಕಪ್, ಪ್ಲಾಸ್ಟಿಕ್ ಸ್ಪೂನ್, ಅಂಟಿಕೊಳ್ಳುವ ಫಿಲ್ಟ್, ಡೈನಿಂಗ್ ಟೇಬಲ್‌ನಲ್ಲಿ ಹರಡಲು ಬಳಸುವ ಪ್ಲಾಸ್ಟಿಕ್ ಹಾಳೆ, ಸ್ಟ್ರಾ, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋಮಣಿಗಳಿಂದ ಮಾಡಿದ ವಸ್ತುಗಳನ್ನು ಈಗಾಗಲೇ ನಿಷೇಧಿಸಲಾಗಿದೆ.
ಹೊಸದಿಲ್ಲಿಯ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮದಂತೆ ಮೇಲ್ಕಂಡ ನಿಷೇಧಿತ ಉತ್ಪನ್ನಗಳ ಜೊತೆಗೆ ಹೆಚ್ಚುವರಿ ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಾದ ಪ್ಲಾಸ್ಟಿಕ್ ಸ್ಟಿಕ್‌ಗಳೊಂದಿಗೆ ಇಯರ್ ಬಡ್ಸ್, ಬಲೂನ್‌ಗಳಿಗೆ ಬಳಸುವ ಪ್ಲಾಸ್ಟಿಕ್ ಸ್ಟಿಕ್, ಪ್ಲಾಸ್ಟಿಕ್ ಧ್ವಜ, ಕ್ಯಾಂಡಿ ಸ್ಟಿಕ್, ಐಸ್ಕ್ರೀಮ್ ಸ್ಟಿಕ್, ಅಲಂಕಾರಕ್ಕಾಗಿ ಬಳಸುವ ಪಾಲಿರಿ ಅಥವಾ ಥರ್ಮಾಕೋಲ್, ಪ್ಲಾಸ್ಟಿಕ್ ಪ್ಲೇಟ್, ಪ್ಲಾಸ್ಟಿಕ್ ಕಪ್ ಮತ್ತು ಲೋಟ, ಫೋರ್ಕ್, ಪ್ಲಾಸ್ಟಿಕ್ ಚಮಚ, ಪ್ಲಾಸ್ಟಿಕ್ ಚಾಕು, ಪ್ಲಾಸ್ಟಿಕ್ ಟ್ರೇಗಳಂತಹ ಕಟ್ಲರಿಗಳು, ಸ್ವೀಟ್ ಬಾಕ್ಸ್‌ಗಳ ಸುತ್ತ ಸುತ್ತುವ ಅಥವಾ ಪ್ಯಾಕಿಂಗ್ ಫಿಲ್ಮಗಳು, ಆಮಂತ್ರಣ ಪತ್ರಮತ್ತು ಸಿಗರೇಟ್ ಪ್ಯಾಕೆಟ್, 100 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಅಥವಾ ಪಿ.ವಿ.ಸಿ ಬ್ಯಾನರ್‌ಗಳು ಹಾಗೂ ಪ್ಲಾಸ್ಟಿಕ್ ಸ್ಟಿರರ್‌ಗಳ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಜುಲೈ 1ರಿಂದ ನಿಷೇಧಿಸಲಾಗುವುದು.
ಆದ್ದರಿಂದ ಮೇಲ್ಕಾಣಿಸಿದ ಎಲ್ಲಾ ವಸ್ತುಗಳ ಉತ್ಪಾದಕರು, ದಾಸ್ತಾನುದಾರರು, ಚಿಲ್ಲರೆ ವ್ಯಾಪಾರಿಗಳು, ಅಂಗಡಿ ಮಾಲಕರು, ಇ-ಕಾಮರ್ಸ್ ಕಂಪೆನಿಗಳು, ಬೀದಿ ವ್ಯಾಪಾರಿಗಳು, ವಾಣಿಜ್ಯ ಸಂಸ್ಥೆಗಳು, ಮಾಲ್‌ಗಳು, ಮಾರುಕಟ್ಟೆ ಸ್ಥಳ, ಶಾಪಿಂಗ್ ಕೇಂದ್ರ, ಸಿನಿಮಾ ಮನೆ, ಪ್ರವಾಸೋದ್ಯಮ ಸ್ಥಳ, ಶಾಲಾ- ಕಾಲೇಜುಗಳು, ಕಚೇರಿ ಸಂಕೀರ್ಣ, ಆಸ್ಪತ್ರೆ, ಇತರೆ ಸಂಸ್ಥೆಗಳು ಮತ್ತು ಸಾಮಾನ್ಯ ಸಾರ್ವಜನಿಕರು ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಲ್ಲಿಸಬೇಕು. ಅಲ್ಲದೇ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳ ಶೂನ್ಯ ದಾಸ್ತಾನುಗಳನ್ನು ಖಚಿತಪಡಿಸಿಕೊಳ್ಳಲು ಜೂನ್ 30ರೊಳಗೆ ಸಂಬಂಧಿಸಿದ ಘಟಕಗಳಿಂದ ಅಗತ್ಯಕ್ರಮ ಕೈಗೊಳ್ಳಬೇಕು.
ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಪರಿಸರ (ಸಂರಕ್ಷಣೆ) ಕಾಯ್ದೆ, ೧೯೮೬ರಡಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ವಶಪಡಿಸಿಕೊಳ್ಳುವ ಮತ್ತು ಮುಚ್ಚುವ ಆದೇಶವನ್ನು ನೀಡಲಾಗುವುದು ಹಾಗೂ ದಂಡ ವಿಧಿಸಲಾಗುವುದು ಎಂದು ಪರಿಸರ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
23/06/2022 09:03 pm