ಉಡುಪಿ: ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ಕಾರಣಕ್ಕೆ ತರಗತಿಗೆ ಪ್ರವೇಶ ನಿರಾಕರಿಸಿದ ಕ್ರಮಕ್ಕೆ ವಿವಿಧ ಸಂಘಟನೆಗಳು ಖಂಡಿಸಿವೆ.
ಸ್ಕಾರ್ಫ್ ಧರಿಸಿದ ಕಾರಣಕ್ಕಾಗಿ ತರಗತಿಗೆ ಪ್ರವೇಶ ನಿರಾಕರಣೆ ಮಾಡಿರುವ ಪ್ರಾಂಶುಪಾಲರ ಕ್ರಮವನ್ನು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ಖಂಡಿಸಿದೆ.
ಶಿಕ್ಷಣಾಧಿಕಾರಿಗಳು ಹಾಗೂ ಸಂಬಂಧಪಟ್ಟವರು ಪ್ರಾಂಶುಪಾಲರ ಈ ತಾರತಮ್ಯ ನೀತಿಯನ್ನು ಗಂಭೀರವಾಗಿ ಪರಿಗಣಿಸಿ ಪ್ರಾಂಶುಪಾಲ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯಾರ್ಥಿನಿಯರಿಗೆ ತರಗತಿಗೆ ಹಾಜರಾಗಲು ಅನುವು ಮಾಡಿಕೊಡಬೇಕು. ಇಲ್ಲವೇ ತೀವ್ರ ಹೋರಾಟ ಮಾಡಲಾಗುವುದು ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಹಿಜಾಬ್ ಧರಿಸಿದ ಕಾರಣಕ್ಕೆ ಮುಸ್ಲಿಂ ವಿಧ್ಯಾರ್ಥಿಯನಿಯರಿಗೆ ತರಗತಿ ಪ್ರವೇಶ ನಿರಾಕರಿಸುತ್ತಿರುವುದು ಸಹಿಸತಕ್ಕದ್ದಲ್ಲ. ವಿದ್ಯಾರ್ಥಿ ಗಳನ್ನು ಒಳ್ಳೆಯ ಪ್ರಜೆಯಾಗಿ ರೂಪಿಸುವ ಶಿಕ್ಷಕ-ಶಿಕ್ಷಕಿಯರೇ ಇಂತಹ ವಿವಾದ ಗಳನ್ನು ಸೃಷ್ಟಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿರುವುದು ಖಂಡನೀಯ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಪ್ರವೇಶ ನಿರಾಕರಣೆಯಂತಹ ಘಟನೆ ನಾಳೆಯೂ ಮುಂದುವರಿದರೆ ಹೋರಾಟದ ಮೂಲಕ ತಕ್ಕ ಉತ್ತರ ನೀಡುವುದು ಅನಿವಾರ್ಯವಾಗಿರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್ ಎಚ್ಚರಿಕೆಯನ್ನು ನೀಡಿದ್ದಾರೆ.
Kshetra Samachara
31/12/2021 08:53 pm