ಉಡುಪಿ: ಕರಾವಳಿಗೆ ಮುಂಗಾರು ಪ್ರವೇಶಿಸಲು ಸಿದ್ಧವಾಗಿರುವಂತೆಯೇ ಇದರಿಂದ ಉಂಟಾಗುವ ವಿವಿಧ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಕೊಂಕಣ ರೈಲ್ವೆ ಕೂಡ ಸಜ್ಜಾಗಿದೆ. ಕೊಂಕಣ ರೈಲ್ವೆಯ 740ಕಿ.ಮೀ. ಮಾರ್ಗದುದ್ದಕ್ಕೂ ಅನೇಕ ಸುರಕ್ಷತಾ ಕ್ರಮಗಳ ಯೋಜನೆಯನ್ನು ಅದು ಪೂರ್ಣಗೊಳಿಸಿದೆ.
ಕೇಂದ್ರ ರೈಲ್ವೆಗೆ ಸೇರಿದ ರೋಹಾದಿಂದ ಸ್ವಲ್ಪ ಮುಂದಿನ ಕೊಲಾಡ್‌ನಿಂದ ಮಂಗಳೂರು ನಿಲ್ದಾಣದಿಂದ ಸ್ವಲ್ಪ ಹಿಂದಿರುವ ತೋಕೂರುವರೆಗಿನ ಮಾರ್ಗ ಕೊಂಕಣ ರೈಲ್ವೆ ಅಡಿಯಲ್ಲಿ ಬರುತ್ತದೆ. ಈ ಮಾರ್ಗದಲ್ಲಿ ಮಳೆಗಾಲದ ಸಮಯದಲ್ಲಿ ಭೂಕುಸಿತ, ಗುಡ್ಡ ಜರಿಯುವುದು, ಬಂಡೆ ಹಳಿಗೆ ಬಡಿಯುವುದು, ಸುರಂಗದಲ್ಲಿ ತಡೆಯುಂಟಾಗುವುದು ಸರ್ವೆಸಾಮಾನ್ಯ ಎನಿಸಿಕೊಂಡಿದೆ.
ಈ ಬಾರಿ ಇಂಥ ಎಲ್ಲಾ ಸಮಸ್ಯೆಗಳ ಕುರಿತು ಮೊದಲೇ ಯೋಚಿಸಿ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಚರಂಡಿಯಲ್ಲಿ ನೀರು ಸರಾಗವಾಗಿ ಹರಿದುಕೊಂಡು ಹೋಗಲು ಅವುಗಳನ್ನು ಸ್ವಚ್ಛಗೊಳಿಸುವ ಹಾಗೂ ಮರಗಳ ಗೆಲ್ಲುಗಳನ್ನು ಕಡಿಯಲಾಗಿದೆ ಎಂದು ಕೊಂಕಣ ರೈಲ್ವೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಕೊಂಕಣ ರೈಲ್ವೆ ಮಾರ್ಗದಲ್ಲಿ ಭೂಕುಸಿತ, ಮಣ್ಣು ಕುಸಿಯುವ ಸಾಧ್ಯತೆ ಇರುವ ಜಾಗಗಳನ್ನು ಗುರುತಿಸಿ ಅಲ್ಲಿ ಮಣ್ಣು ಕುಸಿಯದಂತೆ ಅವುಗಳನ್ನು ಸಮತಟ್ಟುಗೊಳಿಸಲಾಗಿದೆ. ಬಂಡೆಗಳು ಜಾರದಂತೆ ತಡೆ ಹಾಕಲಾಗಿದೆ. ಕಳೆದ ಹತ್ತು ವರ್ಷಗಳಿಂದ ಸತತವಾಗಿ ಕೈಗೊಂಡ ಕ್ರಮಗಳಿಂದ ಈಗ ರೈಲ್ವೆ ಹಳಿಗಳ ಮೇಲೆ ಬಂಡೆ ಕುಸಿಯುವ ಅಥವಾ ಭೂಕುಸಿತದ ಪ್ರಕರಣ ಭಾರೀ ಕಡಿಮೆಯಾಗಿದೆ. ಹೀಗಾಗಿ ಕಳೆದ ವರ್ಷ ಮಳೆಗಾಲದ ಸಮಯದಲ್ಲಿ ಈ ಮಾರ್ಗದಲ್ಲಿ ಸಂಚಾರಕ್ಕೆ ಹೆಚ್ಚು ತೊಂದರೆಯಾಗಿರಲಿಲ್ಲ ಎಂದು ಹೇಳಿಕೆ ತಿಳಿಸಿದೆ.
ಮಳೆಗಾಲದ ಸಮಯದಲ್ಲಿ ಕೊಂಕಣ ರೈಲ್ವೆ ದಿನದ 24 ಗಂಟೆಗಳ ಕಾಲವೂ ಹಳಿಗಳುದ್ದಕ್ಕೂ ಮಾನ್ಸೂನ್ ಪೆಟ್ರೋಲಿಂಗ್' ಮಳೆಗಾಲದ ಗಸ್ತು ನಡೆಸುತ್ತಿದೆ. ಕೊಲಾಡ್‌ನಿಂದ ತೋಕೂರುವರೆಗಿನ ಹಳಿಗಳ ಕಾಯುವಿಕೆಗೆ ಸುಮಾರು 846 ಮಂದಿ ಗಾರ್ಡ್‌ಗಳನ್ನು ನೇಮಿಸಲಾಗುತ್ತದೆ. ಅಪಾಯದ ಶಂಕೆ ಇರುವ ಜಾಗದಲ್ಲಿ 24 ಗಂಟೆಯೂ ವಾಚ್‌ಮನ್ ಕಾಯುವ ವ್ಯವಸ್ಥೆ ಇದೆ.
Kshetra Samachara
03/06/2022 11:34 am