ಕುಂದಾಪುರ: ಕಸ್ತೂರಿ ರಂಗನ್ ವರದಿ ವಿರೋಧಿಸಿ ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮ ಪಂಚಾಯತ್‌ನ ಎಲ್ಲ 8 ಸದಸ್ಯರು ಅಕ್ಟೋಬರ್ 21ರಂದು ನಡೆಯಲಿರುವ ವಿಧಾನ ಪರಿಷತ್ ಉಪಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ.
ಮತದಾನ ಬಹಿಷ್ಕರಿಸುವ ನಿರ್ಧಾರ ಮಾಡಿರುವ ಚಿತ್ತೂರು ಗ್ರಾಪಂ ಸದಸ್ಯರು, ವಿವಿಧ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದರು.ಆದರೆ ಈವರೆಗೆ ಸರಕಾರ ಅಥವಾ ಜಿಲ್ಲಾಡಳಿತದಿಂದ ಭರವಸೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಚಿತ್ತೂರು ಗ್ರಾಪಂ ಅಧ್ಯಕ್ಷ ರವೀಂದ್ರ ಶೆಟ್ಟಿ ಸಹಿತ ಸದಸ್ಯರಾದ ಸುಬ್ಬು, ದಿವಾಕರ ಆಚಾರ್ಯ, ಚಂದ್ರ ಶೆಟ್ಟಿ, ಕಲಾವತಿ, ಸಿ.ಡಿ.ಮಂಜುನಾಥ್, ಜಯಂತಿ, ವಸಂತಿ ಗ್ರಾಮಸ್ಥರ ಹಿತದೃಷ್ಟಿಯಿಂದ ವಿಧಾನ ಪರಿಷತ್ ಉಪ ಚುನಾವಣೆ ಬಹಿಷ್ಕಾರದ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಜನರ ಹಿತದೃಷ್ಟಿಯಿಂದ ಈ ನಿರ್ಣಯ ಮಾಡಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ರವೀಂದ್ರ ಶೆಟ್ಟಿ ತಿಳಿಸಿದ್ದಾರೆ.
Kshetra Samachara
04/10/2024 05:26 pm