ಕುಂದಾಪುರ: ತಾಲೂಕಿನ ಕೋಟೇಶ್ವರ ಹಾಗೂ ಬೀಜಾಡಿಯಲ್ಲಿ ಮುಂಜಾನೆ ಕಳ್ಳರು ಮೂರು ಅಂಗಡಿಗಳಿಗೆ ನುಗ್ಗಿ ಸರಣಿ ಕಳ್ಳತನ ನಡೆಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕುಂಭಾಶಿ ಕಡೆಯಿಂದ ಕಾರಿನಲ್ಲಿ ಬಂದ ಅಪರಿಚಿತರ ತಂಡ ಬೀಜಾಡಿ ಐಸಿರಿ ಮೊಬೈಲ್ ಶಾಪ್‌ನ ಶೆಟರ್ ಮುರಿದು 15 ಸಾವಿರ ರೂ. ನಗದು, ಸುಮಾರು 25 ಸಾವಿರ ರೂ. ಮೌಲ್ಯದ ಮೊಬೈಲ್, 39 ಸಾವಿರ ರೂ. ಮೌಲ್ಯದ ಮೊಬೈಲ್ ಬಿಡಿಭಾಗಗಳನ್ನು ಕಳವು ಮಾಡಿದ್ದಾರೆ.
ಬಳಿಕ ಕಳ್ಳರು, ಕೋಟೇಶ್ವರ ಸಮೀಪದ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಸಮೀಪದ ಉಪಾಧ್ಯಾಯ ಕಾಂಪ್ಲೆಕ್ಸ್‌ನಲ್ಲಿನ ಶ್ರೀದುರ್ಗಾ ಜ್ಯುವೆಲ್ಲರ್ಸ್ ಶೆಟರ್ ಮುರಿದು ಚಿನ್ನ-ಬೆಳ್ಳಿ ದೋಚಲು ಯತ್ನಿಸಿದ್ದು, ಸ್ಥಳೀಯ ಹುಡುಗನ ಸಮಯ ಪ್ರಜ್ಞೆಯಿಂದ ಲಕ್ಷಾಂತರ ಮೌಲ್ಯದ ಭಾರೀ ಕಳ್ಳತನ ತಪ್ಪಿದಂತಾಗಿದೆ.
ಅದೇ ರೀತಿ ಕೋಟೇಶ್ವರದಲ್ಲಿನ ಜುವೆಲ್ಲರಿ ಶಾಪ್‌ನ ಶೆಟರ್ ಮುರಿಯಲು ಪ್ರಯತ್ನ ಮಾಡಿದ್ದಾರೆ. ಇದಲ್ಲದೇ ಪಕ್ಕದಲ್ಲಿದ್ದ ಅಂಗಡಿಯ ಬಾಗಿಲು ಮುರಿದು 1 ಸಾವಿರ ನಗದು ಮತ್ತು ಸಿಗರೇಟ್‌ಗಳನ್ನು ದೋಚಿದ್ದಾರೆ. ಕಳ್ಳತನ ಕೃತ್ಯಕ್ಕೆ ಬಳಸಿದ ಕಾರು ಚಿನ್ನದ ಅಂಗಡಿ ಕಡೆಗೆ ಬರುವ ದೃಶ್ಯ ಹಾಗೂ ಸಿಸಿ ಕ್ಯಾಮರವನ್ನು ತಿರುಗಿಸಿದ ದೃಶಗಳು ಸಿಸಿಯಲ್ಲಿ ಸೆರೆಯಾಗಿವೆ. ಎಲ್ಲ ಸಿಸಿ ಟಿವಿ ಫೂಟೇಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Kshetra Samachara
19/05/2022 11:29 am