ಕುಂದಾಪುರ: ನನಗೆ ನನ್ನದೇ ಗುಜರಿ ಅಂಗಡಿಯಲ್ಲಿ ದೊರೆಯುತ್ತಿದ್ದ ತುಷಾರ, ತರಂಗ ವಾರಪತ್ರಿಕೆಗಳು ಓದುವ ಅವಕಾಶ ನೀಡಿದವು. ಆಗ ಬಹುಮಾನ ಪಡೆಯಲು ಸಾಧ್ಯವಾಗದಿದ್ದರೂ ಓದು ಬಿತ್ತಿದ ಕನಸುಗಳಿಂದಲೇ ಇಂದು ಬಹುಮಾನ ವಿತರಿಸಲು ಸಾಧ್ಯವಾಗಿದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕ ಯಾಕೂಬ್ ಗುಲ್ವಾಡಿ ಹೇಳಿದರು.
ಅವರು ಸಮುದಾಯ ಕುಂದಾಪುರ ಜೇಸಿಐ ಕುಂದಾಪುರದ ಸಹಯೋಗದಲ್ಲಿ ಆಯೋಜಿಸಿದ ಸ್ವಾತಂತ್ರದ ಅಮೃತ ಮಹೋತ್ಸವದ "ಅಮೃತ ಘಳಿಗೆ" ವಿಡಿಯೋ ಭಾಷಣ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಸ್ಪರ್ಧೆಯಲ್ಲಿ ಮಾತನಾಡಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಮುನ್ನೂರಕ್ಕೂ ಹೆಚ್ಚು ಮಕ್ಕಳಿಗೆ ಬಹುಮಾನವನ್ನು ಅಂಚೆಯ ಮೂಲಕ ಕಳುಹಿಸುತ್ತಿದ್ದು, ಮೂವತ್ತು ವಿದ್ಯಾರ್ಥಿಗಳಿಗೆ ಕುಂದಾಪುರದ ಜೇಸಿ ಭವನದಲ್ಲಿ ಇಂದು ಬಹುಮಾನ ವಿತರಿಸಲಾಯಿತು.
ಡಿ.ಎಸ್.ಎಸ್ ಕುಂದಾಪುರ ಘಟಕದ ಅಧ್ಯಕ್ಷ ರಾಜು ಬೆಟ್ಟಿನ ಮನೆ, ಕ್ಯಾಥೋಲಿಕ್ ಸಭಾದ ಕಾರ್ಯದರ್ಶಿ ಶಾಂತಿ ಕ್ವಾಡ್ರೆಸ್, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದ ರಾಘವೇಂದ್ರ ಉಡುಪಿ, ಜೇಸಿಐ ಅಧ್ಯಕ್ಷೆ ನಾಗರತ್ನಾ ಹೇರ್ಳೆ ಉಪಸ್ಥಿತರಿದ್ದರು. ಸಮುದಾಯ ಕುಂದಾಪುರದ ಅಧ್ಯಕ್ಷರಾದ ಉದಯ ಗಾಂವಕರ ಎಲ್ಲರನ್ನೂ ಸ್ವಾಗತಿಸಿದರು. ಸಚಿನ್ ಅಂಕೋಲಾ ವಂದಿಸಿದರು. ರವೀಂದ್ರ ಕೋಡಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
19/09/2022 01:33 pm