ಪಡುಬಿದ್ರಿ: ಕೊರೋನ ಹಿನ್ನಲೆ ಸಮರ್ಪಕ ದುಡಿಮೆ ಇಲ್ಲದೆ ಸಾಲವನ್ನು ಮರು ಪಾವತಿಸಲು ಆಗದ ಚಿಂತೆಯಲ್ಲಿ ಮನನೊಂದು ಪಡುಬಿದ್ರಿಯ ಆಟೋ ಚಾಲಕರೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ರಿಕ್ಷಾ ಚಾಲಕ ಎಂ. ಸತೀಶ್ ಪೂಜಾರಿ (58) ಎಂದು ಗುರುತಿಸಲಾಗಿದೆ. ಇವರು ಈ ಹಿಂದೆ ಬಸ್ ಚಾಲಕರಾಗಿದ್ದರು. ಬಳಿಕ ಪಡುಬಿದ್ರಿಯಲ್ಲಿ ಆಟೋ ರಿಕ್ಷಾ ಚಾಲಕ ವೃತ್ತಿಯಲ್ಲಿ ತೊಡಗಿದ್ದರು. ಸ್ವಂತ ರಿಕ್ಷಾ ಹೊಂದಲು ಹಾಗೂ ಅನಾರೋಗ್ಯಕ್ಕಾಗಿ ಈ ಹಿಂದೆ ವಿವಿಧೆಡೆ ಸಾಲ ಪಡೆದಿದ್ದ ಅವರು, ಪಡುಬಿದ್ರಿ ಪೆಟ್ರೋಲ್ ಬಂಕ್‍ವೊಂದರ ಬಳಿ ಅ. 27ರಂದು ವಿಷ ಸೇವಿಸಿದ್ದರು. ಬಳಿಕ ವಿಷ ಸೇವಿಸಿರುವ ಬಗ್ಗೆ ಇನ್ನೋರ್ವ ಆಟೋ ಚಾಲಕನಿಗೆ ಮಾಹಿತಿ ನೀಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿರುವ ಪಡುಬಿದ್ರಿ ಠಾಣೆ ಪೊಲೀಸರು ತಿಳಿಸಿದ್ದಾರೆ.
Kshetra Samachara
30/10/2020 11:02 am