ಮುಂಬೈ: ನಾಯಕ ಫಾಫ್ ಡು ಪ್ಲೆಸ್ಸಿಸ್ ಅಬ್ಬರದ ಬ್ಯಾಟಿಂಗ್, ಜೋಶ್ ಹೇಜಲ್ವುಡ್ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 18 ರನ್ ರೋಚಕ ಗೆಲುವು ಸಾಧಿಸಿದೆ.
ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆದ 31ನೇ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡವು 6 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತ್ತು.
ಬಳಿಕ ಬ್ಯಾಟಿಂಗ್ ಮಾಡಿದ ಲಕ್ನೋ ತಂಡವು 8 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ಸೋಲು ಒಪ್ಪಿಕೊಂಡಿತು. ಲಕ್ನೋ ಪರ ಕೃನಾಲ್ ಪಾಂಡ್ಯ 42 ರನ್ (28 ಎಸೆತ, 5 ಬೌಂಡರಿ, 2 ಸಿಕ್ಸ್), ನಾಯಕ ಕೆ.ಎಲ್.ರಾಹುಲ್ 30 ರನ್, ಮಾರ್ಕಸ್ ಸ್ಟೊಯಿನಿಸ್ 24 ರನ್ ಗಳಿಸಿದರು. ಉಳಿದಂತೆ ಕ್ವಿಂಟಾನ್ ಡಿ ಕಾಕ್, ಮನೀಶ್ ಪಾಂಡೆ, ದೀಪಕ್ ಬ್ಯಾಟಿಂಗ್ ವೈಫಲ್ಯ ಮೆರೆದರು.
ಆರ್‌ಸಿಬಿ ಪರ ಜೋಶ್ ಹೇಜಲ್ವುಡ್ 4 ವಿಕೆಟ್ ಉರುಳಿಸಿ ಮಿಂಚಿದರೆ, ಹರ್ಷಲ್ ಪಟೇಲ್ 2 ವಿಕೆಟ್, ಗ್ಲೇನ್ ಮ್ಯಾಕ್ಸ್‌ವೆಲ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದುಕೊಂಡು ತಂಡದ ಗೆಲುವಿಗೆ ಕೊಡುಗೆ ನೀಡಿದರು.
ಇದಕ್ಕೂ ಮುನ್ನ ಆರ್‌ಸಿಬಿ ಪರ ನಾಯಕ ಫಾಫ್ ಡು ಪ್ಲೆಸ್ಸಿಸ್ 96 ರನ್ (64 ಎಸೆತ, 11 ಬೌಂಡರಿ, 2 ಸಿಕ್ಸ್), ಶಹಬಾಜ್ ಅಹ್ಮದ್ 26 ರನ್, ಗ್ಲೇನ್ ಮ್ಯಾಕ್ಸ್‌ವೆಲ್ 23 ರನ್ ಹಾಗೂ ದಿನೇಶ್ ಕಾರ್ತಿಕ್ ಅಜೇಯ 13 ರನ್ ಗಳಿಸಿದ್ದರು. ಇನ್ನು ದುಷ್ಮಂತ ಚಮೀರ ಹಾಗೂ ಜೇಸನ್ ಹೋಲ್ಡರ್ ತಲಾ 2 ವಿಕೆಟ್ ಪಡೆದು ಮಿಂಚಿದರೆ, ಕೃನಾಲ್ ಪಾಂಡ್ಯ ಒಂದು ವಿಕೆಟ್ ಉರುಳಿಸಿದ್ದರು.
PublicNext
19/04/2022 11:36 pm