ಮುಂಬೈ: ಟೀಂ ಇಂಡಿಯಾ ಮುಂಬೈ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ 372 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ತವರಿನಲ್ಲಿ ಟೀಂ ಇಂಡಿಯಾ ಸತತವಾಗಿ 14ನೇ ಟೆಸ್ಟ್ ಸರಣಿಯಲ್ಲಿ ಜಯ ಕಂಡಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 1-0 ಅಂತರದಿಂದ ವಶಪಡಿಸಿಕೊಂಡಿದೆ. ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು.
ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು 540 ರನ್ಗಳ ಕಠಿಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ಮೂರನೇ ದಿನದಾಟದಂತ್ಯದ ವೇಳೆಗೆ 5 ವಿಕೆಟ್ ಕಳೆದುಕೊಂಡು ಕೇವಲ 140 ರನ್ ಗಳಿಸಿತ್ತು. ಹೀಗಾಗಿ ಕೊನೆಯ ಎರಡು ದಿನಗಳಲ್ಲಿ ಕಿವೀಸ್ ಗೆ ಗೆಲ್ಲಲು 400 ರನ್ ಗಳ ಅಗತ್ಯವಿತ್ತು. ಆದರೆ ನಾಲ್ಕನೇ ದಿನದಾಟದಲ್ಲಿ ಜಯಂತ್ ಯಾದವ್ ಹಾಗೂ ರವಿಚಂದ್ರನ್ ಅಶ್ವಿನ್ ಮಿಂಚಿನ ಬೌಲಿಂಗ್ ದಾಳಿ ನಡೆಸುವ ಮೂಲಕ ತಂಡದ ಗೆಲುವಿನ ಕಾರಣರಾಗಿದ್ದಾರೆ.
ಭಾರತದ ಹಿಂದಿನ ಅತಿದೊಡ್ಡ ಟೆಸ್ಟ್ ಗೆಲುವು (ರನ್ ಗಳಿಂದ) 2015 ರಲ್ಲಿ ದೆಹಲಿಯಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 337 ರನ್ ಗಳಿಂದ ಸೋಲಿಸಿತು.
PublicNext
06/12/2021 10:48 am