ಅಬುಧಾಬಿ: ಕಗಿಸೊ ರಬಾಡಾ, ಆನ್ರಿಚ್ ನಾರ್ಟ್ಜೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ, ಬ್ಯಾಟಿಂಗ್‌ನಲ್ಲಿ ಕೊಂಚ ಎಡವಿದರೂ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶದ ವಿರುದ್ಧ 6 ವಿಕೆಟ್‌ಗಳಿಂದ ಗೆದ್ದು ಬೀಗಿದೆ.
ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ಇಂದು ಅಬುಧಾಬಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 30ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬಾವುಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾ ಪಡೆ ಹರಿಣರ ಬೌಲಿಂಗ್ ದಾಳಿಗೆ ತತ್ತರಿಸಿತು. ಇದರಿಂದಾಗಿ 18.2 ಓವರ್‌ನಲ್ಲಿಯೇ ಸರ್ವಪತನ ಕಂಡು ಕೇವಲ 84 ರನ್ ಗಳಿಸಲು ಶಕ್ತವಾಗಿತ್ತು.
ಬಾಂಗ್ಲಾ ಪರ ಲಿಟನ್ ದಾಸ್ (24 ರನ್), ಮಹೇದಿ ಹಸನ್ (27 ರನ್) ಹಾಗೂ ಶಮೀಮ್ ಹೊಸೈನ್ (11 ರನ್) ಹೊರತುಪಡಿಸಿ ಎಲ್ಲ ಆಟಗಾರರು ಒಂದಂಕಿ ರನ್ ದಾಟಲು ವಿಫಲರಾದರು. ಈ ವೇಳೆ ಹರಿಣರ ಪಡೆಯ ಕಗಿಸೊ ರಬಾಡಾ, ಆನ್ರಿಚ್ ನಾರ್ಟ್ಜೆ ತಲಾ ಮೂರು ವಿಕೆಟ್ ಪಡೆದು ಮಿಂಚಿದ್ದರು.
ಇದರಿಂದಾಗಿ 85 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 39 ಎಸೆತಗಳು ಬಾಕಿ ಇರುವಂತೆ 4 ವಿಕೆಟ್ ನಷ್ಟಕ್ಕೆ 86 ರನ್ ಚೆಚ್ಚಿ ಜಯದ ನಗೆ ಬೀರಿದೆ. ದಕ್ಷಿಣ ಆಫ್ರಿಕಾ ಪರ ನಾಯಕ ತೆಂಬಾ ಬಾವುಮಾ 31 ರನ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ 22 ರನ್ ಹಾಗೂ ಕ್ವಿಂಟನ್ ಡಿ ಕಾಕ್ 16 ರನ್ ಗಳಿಸಿದರು.
PublicNext
02/11/2021 06:48 pm