ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸತತ ಎರಡನೇ ಸೋಲು ಅನುಭವಿಸಿದೆ. ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ ನಂತರ ಸೆಮಿಫೈನಲ್ ಪ್ರವೇಶಿಸಬೇಕಾದರೆ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಹೆಚ್ಚಾಗಿತ್ತು. ಆದರೆ ಈ ಪಂದ್ಯವನ್ನು ಕೂಡ ಭಾರತ ಭಾರೀ ಅಂತರದಿಂದ ಸೋಲುವ ಮೂಲಕ ಸೆಮಿಫೈನಲ್ ಕನಸನ್ನು ಬಹುತೇಕ ಭಗ್ನಗೊಳಿಸಿದಂತಾಗಿದೆ.
ಹಾಗಿದ್ದರೂ ಟೀಂ ಇಂಡಿಯಾದ ಸೆಮಿಫೈನಲ್ ಕನಸು ಸಂಪೂರ್ಣವಾಗಿ ಇನ್ನೂ ಮುಚ್ಚಿಲ್ಲ ಎಂಬುದು ಗಮನಾರ್ಹ ಅಂಶ. ಈ ನಿಟ್ಟಿನಲ್ಲಿ ಭಾರತವು ಮುಂದಿನ ಮೂರು ಪಂದ್ಯಗಳಲ್ಲಿಯೂ ಗೆಲ್ಲಲೇ ಬೇಕಿದೆ. ಭಾರತ ತನ್ನ ಮುಂದಿನ ಮೂರು ಪಂದ್ಯಗಳನ್ನು ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ವಿರುದ್ಧ ಆಡಲಿದೆ.
ಮತ್ತೊಂದು ಪ್ರಮುಖ ವಿಚಾರವೆಂದರೆ ಅಂಕಪಟ್ಟಿಯ್ಲಲಿ ಮೊದಲ ಸ್ಥಾನದಲ್ಲಿರುವ ಪಾಕಿಸ್ತಾನ ಈಗಾಗಲೇ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಹೀಗಾಗಿ ಉಳಿದ ಒಂದು ಸ್ಥಾನಕ್ಕಾಗಿ ಭಾರತಕ್ಕೆ ನ್ಯೂಜಿಲೆಂಡ್ ಜೊತೆಗೆ ಅಫ್ಘಾನಿಸ್ತಾನ ಕೂಡ ಪೈಪೋಟಿ ನಡೆಸಲಿದೆ. ಮೂರು ಪಂದ್ಯಗಳನ್ನಾಡಿರುವ ಅಫ್ಘಾನಿಸ್ತಾನ 2 ಗೆಲುವು ಸಾಧಿಸಿ 4 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ತಂಡ 2 ಪಂದ್ಯಗಳಲ್ಲಿ 1 ಗೆಲುವು ಸಾಧಿಸಿ 2 ಅಂಕವನ್ನು ಹೊಂದಿದೆ. ಈ ಎರಡು ತಂಡಗಳು ಕೂಡ 6 ಅಂಕಗಳಿಗಿಂತ ಹೆಚ್ಚಿನ ಅಂಕವನ್ನು ಗಳಿಸಬಾರದು. ಅಂದರೆ ನ್ಯೂಜಿಲೆಂಡ್ ತಂಡ ತನ್ನ ಮುಂದಿನ ಮೂರು ಪಂದ್ಯಗಳಲ್ಲಿ 1 ಸೋಲು ಕಾಣಲೇ ಬೇಕು. ಆದರೆ ನ್ಯೂಜಿಲೆಂಡ್ ತಂಡದ ಎದುರಾಳಿಗಳು ದುರ್ಬಲ ತಂಡಗಳು ಎನಿಸಿರುವ ಸ್ಕಾಟ್ಲೆಂಡ್, ನಮೀಬಿಯಾ ಹಾಗೂ ಅಫ್ಘಾನಿಸ್ತಾನ. ಅಫ್ಘಾನಿಸ್ತಾನ ಕೂಡ ತನ್ನ ಎರಡು ಪಂದ್ಯಗಳಲ್ಲಿ ಒಂದು ಗೆದ್ದು ಒಂದು ಸೋಲು ಕಾಣಬೇಕಿದೆ. ಅಫ್ಘಾನಿಸ್ತಾನ ತಂಡ ಮುಂದಿನ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.
ಇಷ್ಟೇ ಅಲ್ಲದೆ ಭಾರತವು ತನ್ನ ನೆಟ್ ರನ್‌ರೇಟ್‌ಅನ್ನು ಕೂಡ ಉತ್ತಮ ಪಡಿಸಿಕೊಳ್ಳಲೇ ಬೇಕಿದೆ. ಹೀಗಾಗಿ ದೊಡ್ಡ ಅಂತರದಿಂದ ಭಾರತ ಗೆಲುವು ಸಂಪಾದಿಸಬೇಕು. ಹಾಗಾದಲ್ಲಿ ಮಾತ್ರವೇ ಭಾರತದ ಸೆಮಿಫೈನಲ್ ಕನಸು ಜೀವಂತವಾಗಿರಲು ಸಾಧ್ಯವಿದೆ.
PublicNext
02/11/2021 12:54 pm