ಡಬ್ಲಿನ್: ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗ ಅಭಿಮಾನಿಗಳು ನಾನಾ ರೀತಿಯ ಅವತಾರಗಳಿಂದ ಮೈದಾನಕ್ಕಿಳಿಯುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಆದರೆ ಐರ್ಲೆಂಡಿನಲ್ಲಿ ನಡೆಯುತ್ತಿರುವ ಟಿ20 ಮಹಿಳಾ ಸೆಮಿಫೈನಲ್ ಕ್ರಿಕೆಟ್ ಪಂದ್ಯಾವಳಿ ವೇಳೆ ನಾಯಿಯೊಂದು ಮೈದಾನಕ್ಕಿಳಿದು ಅದ್ಭುತವಾದ ಫೀಲ್ಡಿಂಗ್ ನಡೆಸಿ ಪ್ರೇಕ್ಷಕರನ್ನು ನಗಿಸಿದ ವಿಡಿಯೋ ಒಂದು ವೈರಲ್ ಆಗಿದೆ.
ಉತ್ತರ ಐರ್ಲೆಂಡಿನ ಮಗೇರಮೆಸಾನ್ನಲ್ಲಿರುವ ಬ್ರೆಡಿ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಬ್ರೆಡಿ ಮತ್ತು ಸಿಎಸ್ಎನ್ಐ ಮಹಿಳಾ ತಂಡಗಳ ನಡುವೆ ಆಲ್ ಐರ್ಲೆಂಡ್ ಟಿ20 ಕಪ್ ಸೆಮಿಫೈನಲ್ ಪಂದ್ಯ ನಡೆಯುತ್ತಿತ್ತು. ಬ್ಯಾಟಿಂಗ್ ಮಾಡುತ್ತಿದ್ದ ಅಬ್ಬಿ ಲೆಖಿ ಚೆಂಡನ್ನು ಆಫ್ಸೈಡ್ ಹೊಡೆದಾಗ ಫೀಲ್ಡರ್ ರನ್ ಔಟ್ ಮಾಡಲು ವಿಕೆಟ್ ಕೀಪರ್ ರಾಚೆಲ್ ಹೆಪ್ಬರ್ನ್ಗೆ ಚೆಂಡನ್ನು ಪಾಸ್ ಮಾಡಿದರು. ಆದರೆ ಹೆಪ್ಬರ್ನ್ ಅವರು ವಿಕೆಟ್ ಕಡೆ ಎಸೆದ ಬಾಲ್ ವಿಕೆಟ್‌ಅನ್ನು ಮಿಸ್ ಮಾಡಿ ಆಚೆಗೆ ಹೋಯಿತು. ಆ ಸಮಯಕ್ಕೆ ಕ್ರೀಡಾಂಗಣ ಪ್ರವೇಶಿಸಿದ್ದ ಪುಟಾಣಿ ನಾಯಿಯೊಂದು, ಚೆಂಡನ್ನು ಕಚ್ಚಿಕೊಂಡು ಓಡಲು ಆರಂಭಿಸಿತು.
ಆಟ ಸ್ಥಗಿತಗೊಂಡಂತೆ, ಫೀಲ್ಡರ್ಗಳು ಚೆಂಡನ್ನು ವಾಪಸ್ ಪಡೆಯಲು ನಾಯಿಯನ್ನು ಹಿಡಿಯುವ ಪ್ರಯತ್ನ ಆರಂಭಿಸಿದರು. ಈ ವೇಳೆ ನಾಯಿಯ ಮಾಲೀಕನಾದ ಬಾಲಕನೊಬ್ಬ ಅದನ್ನು ಹಿಡಿಯಲು ಓಡಿಬಂದ. ಕೊನೆಗೆ ನಾನ್ ಸ್ಟ್ರೈಕರ್ ಅಯೋಫೆ ಫಿಶರ್ ಬಳಿ ಆ ನಾಯಿ ಚೆಂಡನ್ನು ಬಿಟ್ಟಿತು. ಈ ಪ್ರಸಂಗ ಆಟಗಾರರಲ್ಲಿ ಉಲ್ಲಾಸ ಮೂಡಿಸಿದರೆ, ಪ್ರೇಕ್ಷಕರ ಮೊಗಗಳಲ್ಲಿ ನಗೆ ಅರಳಿತು.
PublicNext
12/09/2021 02:08 pm