ಓವಲ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ತೋರಿದ ಅನುಚಿತ ವರ್ತನೆಗೆ ಟೀಂ ಇಂಡಿಯಾ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ಗೆ ಐಸಿಸಿ ದಂಡ ವಿಧಿಸಿದೆ.
ಲಂಡನ್‌ನ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ದ್ವಿತೀಯ ಇನ್ನಿಂಗ್ಸ್ ಆಡುತ್ತಿದ್ದು, ಶನಿವಾರ (ಸೆಪ್ಟೆಂಬರ್ 4) ಮೂರನೇ ದಿನದಾಟದ ಅಂತ್ಯಕ್ಕೆ 171 ರನ್ ಮುನ್ನಡೆಯಲ್ಲಿದೆ.
ಎರಡನೇ ಇನ್ನಿಂಗ್ಸ್‌ನ 34ನೇ ಓವರ್‌ನಲ್ಲಿ ಜೇಮ್ಸ್ ಆಂಡರ್ಸನ್ ಎಸೆತದಲ್ಲಿ ರಾಹುಲ್ ವಿಕೆಟ್ಗಾಗಿ ಮನವಿ ಮಾಡಲಾಗಿತ್ತು. ಚೆಂಡು ಬ್ಯಾಟ್ ಸವರಿ ಕೀಪರ್ ಕೈ ಸೇರಿದ್ದರಿಂದ ಇಂಗ್ಲೆಂಡ್ ಆಟಗಾರರು ಮನವಿ ಮಾಡಿದ್ದರು. ಆದರೆ ಫೀಲ್ಡ್ ಅಂಪೈರ್ ನಾಟೌಟ್ ಎಂದು ನೀಡಿದ ತೀರ್ಪಿನ ವಿರುದ್ಧ ಇಂಗ್ಲೆಂಡ್ ನಾಯಕ ಜೋ ರೂಟ್ ಡಿಆರ್‌ಎಸ್ ಮೊರೆ ಹೋಗಿದ್ದರು. ಚೆಂಡು ಬ್ಯಾಟ್ ಸವರಿ ಕೀಪರ್ ಕೈ ಸೇರಿರುವುದು ಡಿಆರ್‌ಎಸ್ ಪರಿಶೀಲನೆ ವೇಳೆ ಸ್ಷಷ್ಟವಾಗಿತ್ತು. ಇದಾಗ್ಯೂ ಅಂಪೈರ್ ಔಟ್ ನೀಡುತ್ತಿದ್ದಂತೆ ರಾಹುಲ್ ಅಸಮಾಧಾನ ವ್ಯಕ್ತಪಡಿಸಿ ಹೊರ ನಡೆದಿದ್ದರು.
ಈ ಬಗ್ಗೆ ಆನ್-ಫೀಲ್ಡ್ ಅಂಪೈರ್‌ಗಳಾದ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ಅಲೆಕ್ಸ್ ವಾರ್ಫ್ ಮ್ಯಾಚ್ ರೆಫರಿಗೆ ದೂರು ನೀಡಿದ್ದರು. ಅದರಂತೆ ಅಂಪೈರ್ ನಿರ್ಧಾರಕ್ಕೆ ಅಸಮ್ಮತಿ ತೋರಿದ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಅವರು ಪಂದ್ಯದ ಶುಲ್ಕದ ಶೇ. 15 ರಷ್ಟು ದಂಡವನ್ನು ಪಾವತಿಸಬೇಕಿದೆ.
PublicNext
05/09/2021 03:28 pm