ತಿರುವನಂತಪುರ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪುರುಷ ಹಾಕಿಯಲ್ಲಿ 41 ವರ್ಷಗಳ ಬಳಿಕ ಭಾರತ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ತಂಡದ ನಗದು ಬಹುಮಾನಗಳು ಸಾಲು ಸಾಲಾಗಿ ಬರುತ್ತಿವೆ. ಹರಿಯಾಣ ಸರ್ಕಾರವು ಒಲಿಂಪಿಕ್ಸ್ ಪದಕ ವಿಜೇತ ಹಾಕಿ ತಂಡಕ್ಕೆ 6 ಕೋಟಿ ಘೋಷಿಸಿದರೆ, ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಕೇರಳದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರಿಗೆ ದುಬೈ ಮೂಲದ ಉದ್ಯಮಿ, 1 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ.
ವಿಪಿಎಸ್ ಹೆಲ್ತ್‌ಕೇರ್ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಶಂಸೀರ್ ವಯಲಿಲ್ ಅವರು, ಶ್ರೀಜೇಶ್ ಅವರಿಗೆ ನಗದು ಬಹುಮಾನವನ್ನು ಘೋಷಿಸಿದ್ದಾರೆ. 'ಒಲಿಂಪಿಕ್ಸ್‌ನಲ್ಲಿ ಭಾರತ ಕಂಚಿನ ಪದಕ ಗೆಲ್ಲುವಲ್ಲಿ ಶ್ರೀಜೇಶ್ ಮಹತ್ತರ ಪಾತ್ರ ವಹಿಸಿದ್ದಾರೆ. ಭಾರತೀಯ ಹಾಕಿ ಕ್ರೀಡೆಗೆ ಅವರ ಕೊಡುಗೆಯನ್ನು ಗುರುತಿಸಿ ನಗದು ಬಹುಮಾನ ಘೋಷಿಸಲು ಖುಷಿಪಡುತ್ತಿದ್ದೇವೆ' ಎಂದು ದುಬೈಯಲ್ಲಿ ನೆಲೆಸಿರುವ ಕೇರಳ ಮೂಲದ ಉದ್ಯಮಿ ತಿಳಿಸಿದ್ದಾರೆ.
ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ವಿರುದ್ಧ 5-4 ಗೋಲುಗಳಿಂದ ಗೆಲುವು ದಾಖಲಿಸಿದ ಭಾರತದ ಹಾಕಿ ತಂಡವು 41 ವರ್ಷಗಳ ಬಳಿಕ ಪದಕ ಜಯಿಸಿತ್ತು. ತಡೆಗೋಡೆ ಖ್ಯಾತಿಯ ಶ್ರೀಜೇಶ್, ನಿರ್ಣಾಯಕ ಹಂತದಲ್ಲಿ ಅನೇಕ ಗೋಲುಗಳನ್ನು ತಡೆದಿದ್ದರು. ಜರ್ಮನಿ ವಿರುದ್ಧದ ಪಂದ್ಯದಲ್ಲೂ ಪಂದ್ಯ ಕೊನೆಗೊಳ್ಳಲು ಕೇವಲ ಆರು ಸೆಕೆಂಡುಗಳು ಮಾತ್ರ ಬಾಕಿ ಇರುವಾಗ ಅದ್ಭುತ ಸೇವ್ ಮಾಡಿ ಭಾರತಕ್ಕೆ ಕಂಚಿನ ಪದಕ ಗೆಲ್ಲುವಲ್ಲಿ ನೆರವಾಗಿದ್ದರು.
PublicNext
09/08/2021 04:17 pm