ದುಬೈ: ಭಾರತದಲ್ಲಿ ನಡೆಯಬೇಕಿದ್ದ 2021ರ ಟಿ20 ವಿಶ್ವಕಪ್ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಯುಎಇನಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಈಗ ಈ ವಿಶ್ವಕಪ್‌ನಲ್ಲಿ ನಡೆಯಲಿರುವ ಕುತೂಹಲಕಾರಿ ಪಂದ್ಯವಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ದಿನಾಂಕ ಬಹಿರಂಗವಾಗಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು ನಾನಾ ಕಾರಣದಿಂದಾಗಿ ದ್ವಿಪಕ್ಷೀಯ ಸರಣಿಯಲ್ಲಿ ಭಾಗಿಯಾಗುತ್ತಿಲ್ಲ. ದ್ವಿಪಕ್ಷೀಯ ಸರಣಿಯಲ್ಲಿ ಭಾಗಿಯಾಗಿ ಸುಮಾರು ಒಂದು ದಶಕವಾಗುತ್ತಾ ಬಂದಿದೆ. ಈಗ ಈ ಎರಡು ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಮುಖಾಮುಖಿಯಾಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಈ ಕದನ ಸಾಕಷ್ಟು ನಿರೀಕ್ಷೆಯನ್ನು ಮೂಡಿಸುತ್ತದೆ. ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯ ಅಕ್ಟೋಬರ್ರ 24ರಂದು ದುಬೈನಲ್ಲಿ ನಡೆಯಲಿದೆ ಎನ್ನಲಾಗಿದೆ.
ಟಿ20 ವಿಶ್ವಕಪ್ 2021ಕ್ಕೆ ಬಿಸಿಸಿಐ ಆತಿಥ್ಯ ವಹಿಸಲಿದ್ದು, ಪಂದ್ಯಗಳು ಒಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಟೂರ್ನಿ ನಡೆಯಲಿವೆ ಎಂದು ಕಳೆದ ತಿಂಗಳು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಘೋಷಣೆ ಮಾಡಿತ್ತು.
ಮಾರ್ಚ್ 20, 2021ರ ವೇಳೆಗೆ ಇದ್ದ ಶ್ರೇಯಾಂಕಗಳ ಆಧಾರದ ಮೇಲೆ ಗುಂಪುಗಳನ್ನು ಆಯ್ಕೆ ಮಾಡಲಾಗಿತ್ತು. ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೂಪರ್ 12ರ ಗ್ರೂಪ್ ಒಂದರಲ್ಲಿವೆ. ಗ್ರೂಪ್ ಎರಡರಲ್ಲಿ ಭಾರತ ಮತ್ತು ಪಾಕಿಸ್ತಾನ, ನ್ಯೂಜಿಲ್ಯಾಂಡ್, ಅಫ್ಘಾನಿಸ್ತಾನ ಮುಂತಾದ ತಂಡಗಳಿವೆ.
PublicNext
04/08/2021 03:07 pm