ಅಬುಧಾಬಿ: ಮಾಹಿಪಾಲ್ ಲಮ್ರೋರ್ ತಾಳ್ಮೆಯ ಹೊಡೆತ ಹಾಗೂ ಕೊನೆಯಲ್ಲಿ ತೇವಾಟಿಯಾ, ಆರ್ಚರ್ ಭರ್ಜರಿ ಬ್ಯಾಟಿಂಗ್ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ ತಂಡವು ಆರ್‌ಸಿಬಿಗೆ 155 ರನ್‌ಗಳ ಗುರಿ ನೀಡಿದೆ.
ಅಬುಧಾಬಿ ಶೇಖ್ ಜಾಹೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ನ 15ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸ್ಮಿತ್ ಪಡೆ ವೈಫಲ್ಯ ಮೆರೆಯಿತು. ಪರಿಣಾಮ ನಿಗದಿತ 20 ಓವರ್‌ಗಳಲ್ಲಿ ರಾಜಸ್ಥಾನ್ ತಂಡವು ಮಾಹಿಪಾಲ್ ಲಮ್ರೋರ್ 47 ರನ್ (39 ಎಸೆತ, 1 ಬೌಂಡರಿ, 3 ಸಿಕ್ಸರ್), ಜಾಸ್ ಬಟ್ಲರ್ 22 ರನ್ (12 ಎಸೆತ, 3 ಬೌಂಡರಿ, 1 ಸಿಕ್ಸ್) ಸಹಾಯದಿಂದ 6 ವಿಕೆಟ್ ನಷ್ಟಕ್ಕೆ 154 ರನ್ ದಾಖಲಿಸಿತು.
ಆರ್‌ಸಿಬಿಯ ಯಜುವೇಂದ್ರ ಚಹಲ್ ಅದ್ಭುತ ಬೌಲಿಂಗ್ ಪ್ರದರ್ಶನ ಮುಂದುವರಿಸಿದ್ದು, 4 ಓವರ್ ಬೌಲಿಂಗ್ ಮಾಡಿದ ಅವರು ಪ್ರಮುಖ 3 ವಿಕೆಟ್ ಕಿತ್ತು ತಂಡಕ್ಕೆ ನೆರವಾದರು. ಇನ್ನು ಇಸುರು ಉದಾನ 2 ವಿಕೆಟ್ ಹಾಗೂ ನವದೀಪ್ ಸೈನಿ 1 ವಿಕೆಟ್ ಕಿತ್ತು ಸೈ ಎನಿಸಿಕೊಂಡರು.
ಟಾಸ್ ಗೆದ್ದ ಆರ್ಆರ್ ತಂಡದ ನಾಯಕ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಕಣಕ್ಕಿಳಿದ ಓಪನರ್ಗಳ ಪೈಕಿ ನಾಯಕ ಸ್ಮಿತ್ (5 ರನ್) ಕ್ಲೀನ್ ಬೌಲ್ಡ್ ಆದರು. ಇದಾದ ಬೆನ್ನಲ್ಲೇ 22 ರನ್ ಗಳಿಸಿದ್ದ ಜಾಸ್ ಬಟ್ಲರ್ ಕೂಡ ವಿಕೆಟ್ ಕಳೆದುಕೊಂಡರು. ಈ ಹಿಂದಿನ ಪಂದ್ಯಗಳಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದ ಸಂಜು ಸ್ಯಾಮ್ಸನ್ ಈ ಬಾರಿ ಕೇವಲ 4 ರನ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಮರಳಿದರು. ಅನುಭವಿ ರಾಬಿನ್ ಉತ್ತಪ್ಪ ಮತ್ತೆ ಬ್ಯಾಟಿಂಗ್ ವೈಫಲ್ಯ ಮೆರೆದರು. ಅವರು ಕೇವಲ 17 ರನ್ಗೆ ವಿಕೆಟ್ ಒಪ್ಪಿಸಿದರು.
ತಂಡಕ್ಕೆ ಆಸರೆಯಾದ ಮಾಹಿಪಾಲ್ ಲಮ್ರೋರ್ ಹಾಗೂ ರಿಯಾನ್ ಪರಾಗ್ ಜೋಡಿಯು 5ನೇ ವಿಕೆಟ್ ನಷ್ಟಕ್ಕೆ 35 ರನ್‌ಗಳ ಕೊಡುಗೆ ನೀಡಿತು. ರಿಯಾನ್ ಪರಾಗ್ (16 ರನ್) ಬೆನ್ನಲ್ಲೇ ಮಾಹಿಪಾಲ್ ಲಮ್ರೋರ್ (47 ರನ್) ವಿಕೆಟ್ ಕಳೆದುಕೊಂಡರು. ಕೊನೆಯಲ್ಲಿ ರಾಹುಲ್ ತೇವಾಟಿಯಾ ( 24 ರನ್) ಹಾಗೂ ಜೋಫ್ರಾ ಆರ್ಚರ್ ( 16 ರನ್) ಭರ್ಜರಿ ಬ್ಯಾಟಿಂಗ್ ಮಾಡಿದರು.
PublicNext
03/10/2020 05:33 pm